ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡವನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಈ ವೇಳೆ ಕನ್ನಡದಲ್ಲಿ ಒಟಿಟಿ ವೇದಿಕೆ ತರಲು, ಸಂಬಂಧ ಪಟ್ಟವರ ಜೊತೆ ಮಾತನಾಡುತ್ತೇನೆ, ರಾಜ್ಕುಮಾರ್ ಕನಸಿನಂತೆ ಫಿಲ್ಮ್ ಸಿಟಿ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಉದ್ಘಾಟನೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಿನ್ನೆ ದೆಹಲಿಗೆ ಹೋಗಿದ್ದೆ. ಇವತ್ತು ಈ ಕಾರ್ಯಕ್ರಮಕ್ಕೆ ಬರುವ ಸಾಧ್ಯತೆ ಕಡಿಮೆ ಇತ್ತು. ಕನ್ನಡ ಚಿತ್ರರಂಗದ ಮೇಲೆ ನನಗೆ ಅಪಾರ ಗೌರವ ಇದೆ. ಮಿಸ್ ಮಾಡದೇ ಬರಬೇಕು ಎಂದು ಬಂದಿದ್ದೇನೆ. ಕನ್ನಡ ಚಿತ್ರರಂಗದ ಬೆಳವಣಿಗೆಗೆ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನಮ್ಮಿಂದ ಇರುತ್ತದೆ. ಚಿತ್ರಮಂದಿರಗಳು, ಸಬ್ಸಿಡಿ ಬಗ್ಗೆ ಗಮನ ಹರಿಸಿ ಆರ್ಥಿಕ ನೆರವು ನೀಡುತ್ತೇವೆ. ಜೊತೆಗೆ ಕನ್ನಡದಲ್ಲಿ ಒಟಿಟಿ ವೇದಿಕೆ ತರಲು, ಸಂಬಂಧ ಪಟ್ಟವರ ಜೊತೆ ಮಾತನಾಡುತ್ತೇವೆ. ಡಾ.ರಾಜ್ಕುಮಾರ್ ಕನಸಿನಂತೆ ಖಂಡಿತಾ ಒಂದು ಫಿಲ್ಮ್ ಸಿಟಿ ನಿರ್ಮಾಣ ಮಾಡುತ್ತೇವೆ. ಕನ್ನಡ ಭಾಷೆಯ ಚಿತ್ರಗಳಿಗೆ ಸರ್ಕಾರ ಯಾವಾಗಲೂ ಬೆಂಬಲ ಸೂಚಿಸುತ್ತದೆ. ಫಿಲ್ಸ್ ಸಿಟಿಗೆ ಜಾಗ ಕೊಟ್ಟಿದೆ ನಮ್ಮ ಸರ್ಕಾರ. ನೂರು ಏಕೆರೆಗೂ ಹೆಚ್ಚು ಜಮೀನು ಕೊಟ್ಟಿದ್ದೇವೆ ಎಂದರು.
ಈ ವೇಳೆ ನಟ ಶಿವರಾಜ್ ಕುಮಾರ್ ಮಾತನಾಡಿ, ಭಾನುವಾರ ಇಂತಹ ಕಾರ್ಯಕ್ರಮಗಳಿಗೆ ಯಾರು ಬರೋದಿಲ್ಲ ಅಂಥದರಲ್ಲಿ ಇವತ್ತು ಸಿಎಂ ಸಿದ್ದರಾಮಯ್ಯ ಬಂದಿದ್ದಾರೆ. ನಮ್ಮ ಚಿತ್ರರಂಗದ ಎಲ್ಲಾ ಸಮಸ್ಯೆಗಳನ್ನ ಬಗೆಹರಿಸಲು ಸರ್ಕಾರ ವಿದೆ. ಅಪ್ಪಾಜಿಗೆ ಸಿದ್ಧರಾಮಯ್ಯ ಮೇಲೆ ವಿಶೇಷ ಗೌರವವಿತ್ತು. ನಮಗೂ ಕೂಡ ಇದೆ ಎಂದಿದ್ದಾರೆ. ಬಳಿಕ ಇದು ಕೇವಲ ಕಟ್ಟಡ ಅಲ್ಲ ಅನ್ನದಾತರ ಮನೆಯಾಗಿದೆ. ನಿರ್ಮಾಪಕರ ಜೊತೆ ಸದಾ ನಾನು ಇರುತ್ತೇನೆ ಎಂದು ಶಿವಣ್ಣ ಬೆಂಬಲ ಸೂಚಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ನವರಸನಾಯಕ ಜಗ್ಗೇಶ್, ಶಿವರಾಜ್ ಕುಮಾರ್, ಸಾಧುಕೋಕಿಲ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು. ಹೊಂಬಾಳೆ ಸಂಸ್ಥೆ, ವಾಣಿಜ್ಯ ಮಂಡಳಿ ಸೇರಿದಂತೆ ಅನೇಕರು ಈ ನೂತನ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ.