ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆಯಾಗಿದ್ದು, ಜನರು ಅಸಮಾಧಾನ ಹೊರಹಾಕಿದ್ದಾರೆ. ಇದರ ಮಧ್ಯೆಯೇ ನಂದಿನಿ ಉತ್ಪನ್ನ ಮಾರಾಟ ವರ್ತಕರು ಹಾಲಿನ ಎಂಆರ್ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ನಂದಿನಿ ಮಾರಾಟ ವರ್ತಕರಿಗೆ ಕೆಎಂಎಫ್ ಎಚ್ಚರಿಕೆ ನೀಡಿದೆ.
ಹೌದು, ಮೊನ್ನೆ ವರಿಗೆ 22 ರೂ. ಇದ್ದ 500 ಎಂಎಲ್ ನಂದಿನಿ ಈಗ 550 ಎಂಎಲ್ ಪ್ಯಾಕೇಟ್ ಆಗಿ 24 ರೂ. ಆಗಿದೆ. ಇದೇ ರೀತಿ ಪ್ರತಿ ಪ್ಯಾಕೇಟ್ಗೆ 50 ಎಂಎಲ್ ಅಧಿಕ ಹಾಲು ನೀಡಿ 2 ರೂ. ಹೆಚ್ಚು ಮಾಡಿದೆ. ಇದಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ನಂದಿನಿ ಹಾಲನ್ನು ಅಧಿಕೃತ ಸ್ಟೋರ್ಗಳಲ್ಲಿ ಮಾತ್ರವಲ್ಲದೇ ಇತರ ಅಂಗಡಿಗಳಲ್ಲೂ ಮಾರಾಟ ಮಾಡಲಾಗುತ್ತದೆ.
ಬೆಳಗಿನ ಸಮಯದಲ್ಲಿ ಬಿಟ್ಟು ಉಳಿದ ಸಮಯದಲ್ಲಿ ಕೆಲ ನಂದಿನಿ ಡೀಲರ್ಸ್ಗಳು ಮಾತ್ರವಲ್ಲದೇ ಉಳಿದ ಅನೇಕ ಕಡೆ ಎಂಆರ್ಪಿಗಿಂತ ಹೆಚ್ಚಿನ ಬೆಲೆ ಪಡೆಯುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬರುತ್ತಿವೆ. ಇದಕ್ಕೆ ಕಡಿವಾಣ ಹಾಕಿ ಗ್ರಾಹಕರಿಂದ ಹೆಚ್ಚಿನ ಹಣ ಪಡೆಯುವುದನ್ನು ನಿಲ್ಲಿಸಲು ಕೆಎಂಎಫ್ ಮುಂದಾಗಿದೆ. ಎಂಆರ್ಪಿಗಿಂತ ಹೆಚ್ಚಿನ ಹಣ ಪಡೆಯುವ ಬಗ್ಗೆ ಗ್ರಾಹಕರು ದೂರು ನೀಡಿದರೆ, ಅಂತಹವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಲೈಸೆನ್ಸ್ ರದ್ದು ಮಾಡುವುದಾಗಿ ಕೆಎಂಎಫ್ ಎಚ್ಚರಿಸಿದೆ.