ಮಂಡ್ಯ: ರಾಜ್ಯದಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆಗಳು ಏಕೆಯಾಗುತ್ತಿವೆ. ಲೋಕಸಭಾ ಚುನಾವಣೆ ಫಲಿತಾಂಶ ನೋಡಿದಾಗ ಗ್ಯಾರಂಟಿಗಳು ವರ್ಕ್ ಆಗಿಲ್ಲ. ಇದೆಲ್ಲವನ್ನೂ ಗಮನಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಹೆಚ್ಚು ದಿನ ಇರೋದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭವಿಷ್ಯ ನುಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಐದು ಗ್ಯಾರಂಟಿಗಳ ನಿರ್ವಹಣೆಗಾಗಿ ರಾಜ್ಯ ಸರಕಾರ ಎಲ್ಲ ವಸ್ತುಗಳ ಬೆಲೆ ಏರಿಸುತ್ತಿದೆ. ಇದರ ವಿರುದ್ಧ ಜೆಡಿಎಸ್ ಹೋರಾಟ ಮಾಡುತ್ತಿದೆ,” ಎಂದು ಹೇಳಿದರು.
“ಲೋಕಸಭೆ ಚುನಾವಣೆ ಫಲಿತಾಂಶದಿಂದ ಬೇಸರಗೊಂಡಿರುವ ಕಾಂಗ್ರೆಸ್ ನಾಯಕರೇ ಗ್ಯಾರಂಟಿಗಳನ್ನು ರದ್ದು ಮಾಡಬೇಕು ಎನ್ನುತ್ತಿದ್ದಾರೆ. ನಮ್ಮ ಜನ ಗ್ಯಾರಂಟಿಗಳನ್ನು ನಂಬಿಕೊಂಡು ಜೀವನ ಮಾಡುತ್ತಿಲ್ಲ. ಜನರು ಗ್ಯಾರಂಟಿಯನ್ನು ಕೇಳಿರಲಿಲ್ಲ. ಆದರೆ, ಗ್ಯಾರಂಟಿಗಳನ್ನು ಕೊಟ್ಟೂ ಕಾಂಗ್ರೆಸ್ ಸರಕಾರವು ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ,” ಎಂದು ಲೇವಡಿ ಮಾಡಿದರು.
‘ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನೇ ಸಿಎಂ ಆಗಿ ಮುಂದುರಿಸುತ್ತದೋ ಅಥವಾ ಬೇರೆಯವರನ್ನು ಮಾಡುವುದೋ ಗೊತ್ತಿಲ್ಲ. ಇದೀಗ ಐದು ಮಂದಿ ಉಪಮುಖ್ಯಮಂತ್ರಿ ವಿಚಾರ ಕಾಂಗ್ರೆಸ್ ಪಕ್ಷದೊಳಗೆ ಕೋಲಾಹಲ ಸೃಷ್ಟಿಸಿದೆ. ಐದು ಜನರನ್ನು ಡಿಸಿಎಂ ಮಾಡುತ್ತಾರೋ ನೋಡೋಣ. ಆದರೆ, ಈ ಸರಕಾರ ಜಾಸ್ತಿ ದಿನ ಇರೋದಿಲ್ಲ ಅನಿಸುತ್ತಿದೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ,” ಎಂದು ಮಾರ್ಮಿಕವಾಗಿ ನುಡಿದರು.