ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಈ ಬಗ್ಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದು ಮತ್ತಷ್ಟು ಮಂದಿ ಏನು ಮಾತನಾಡಿದ ಸೈಲೆಂಟ್ ಆಗಿದ್ದಾರೆ. ಇದೀಗ ಘಟನೆಯ ಕುರಿತು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಪ್ರತಿಕ್ರಿಯಿಸಿದ್ದು, ಮಗು ತಪ್ಪು ಮಾಡಿದ್ರೆ ತಂದೆ ಎಷ್ಟು ನೋವು ತಿಂತಾನೋ, ನಾನು ಅಷ್ಟೇ ನೋವು ತಿಂತಿದ್ದೀನಿ. ಆ ಮಗು ಕೂಡ ಅಷ್ಟೇ ನೋವು ಅನುಭವಿಸುತ್ತಿರುತ್ತದೆ ಎಂದಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ದರ್ಶನ್ ನನ್ನ ಮಗು ಅಂತ ತಿಳಿದುಕೊಳ್ಳಿ. ಮಗು ತಪ್ಪು ಮಾಡಿದ್ರೆ ತಂದೆ ಎಷ್ಟು ನೋವು ತಿಂತಾನೋ, ನಾನು ಅಷ್ಟೇ ನೋವು ತಿಂತಿದ್ದೀನಿ. ಆ ಮಗು ಕೂಡ ಅಷ್ಟೇ ನೋವು ತಿಂತಿರುತ್ತೆ. ನಾವು ಆತ ಕೊಟ್ಟಿರುವ ಕೊಡುಗೆ ಕಡೆ ಗಮನ ಕೊಡೋಣ ಎಂದು ತಿಳಿಸಿದ್ದಾರೆ.
ಅತ್ಯುನ್ನತ ಸ್ಥಾನಕ್ಕೆ ಏರಿದವನು ಮತ್ತೆ ಕೆಳಗೆ ಬೀಳೋದು ಬೇಡ. ಕೇರಳ ಚಿತ್ರೋದ್ಯಮ ಹೀಗೇ ಆಗಿತ್ತು. ಅದೀಗ ಉತ್ತುಂಗದಲ್ಲಿದೆ. ಕೆಳಗೆ ಬಿದ್ದು ಮತ್ತೆ ಮೇಲೆ ಎದ್ದಿದೆ. ನಮ್ಮದು ಚಂದನವನ. ಒಂದು ಮಳೆಗೆ ಮರ ಒಣಗಿದರೇನಂತೆ. ಇನ್ನೊಂದು ಮಳೆಗೆ ಕಾಡು ಬೆಳೆದೇ ಬೆಳೆಯುತ್ತೆ ಎಂದು ಹೇಳಿದರು.
ಸಿನಿಮಾ ಕಲಾವಿದರಾದವರು ಚಿಕ್ಕದಾಗಿ ಯೋಚನೆ ಮಾಡಬೇಕು. ಸಿಟ್ಟನ್ನ ಸ್ಕ್ರಿಪ್ಟ್ ಮಾಡಬೇಕು, ದ್ವೇಷವನ್ನ ಕ್ಯಾರೆಕ್ಟರ್ ಮಾಡಬೇಕು. ನಾವು ಆ ರೀತಿ ಸಿನಿಮಾದಲ್ಲಿ ತೋರಿಸಬೇಕು ಅಷ್ಟೇ. ನಿಜ ಜೀವನದಲ್ಲಿ ಸ್ಕ್ರಿಪ್ಟನ್ನ ತರಬಾರದು. ನಿಜ ಜೀವನದಲ್ಲಿ ಕ್ಯಾರೆಕ್ಟರ್ ಆಗಬಾರದು ಎಂದು ಕಲಾವಿದರಿಗೆ ಕಿವಿ ಮಾತು ಹೇಳಿದರು.