2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಆ ಸಂದರ್ಭದಲ್ಲಿ, ಸಮಯ, ಸನ್ನಿವೇಶ ನೋಡಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಕ್ಲೇಮ್ ಮಾಡುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರ ತಿಳಿಸಿದ್ದಾರೆ.
ಈಗಾಗಲೇ ಸಿಎಂ ಹುದ್ದೆಯನ್ನು ಬಿಟ್ಟುಕೊಡುವಂತೆ ಒಂದು ಕಡೆಯಿಂದ ಒಕ್ಕಲಿಗ ಸ್ವಾಮೀಜಿಗಳು,
ಮತ್ತೊಂದು ಕಡೆಯಿಂದ ಲಿಂಗಾಯ ಸ್ವಾಮೀಜಿಗಳಿಂದ ಆಗ್ರಹಗಳು ಕೇಳಿಬಂದಿವೆ. ಇದರ ನಡುವೆಯೇ, ಸತೀಶ್ ಜಾರಕಿಹೊಳಿಯವರ ಸಿಎಂ ಕ್ಲೇಮ್ ಹೇಳಿಕೆ ಗಮನ ಸೆಳೆದಿದೆ.
ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದು ಹೋದ ಚರ್ಚೆ ಎಂದು ಹೇಳಿದ ಅವರು, ದೆಹಲಿ ಬೆಂಗಳೂರಿನಲ್ಲಿ ಸಾಕಷ್ಟು ವಿಚಾರಗಳನ್ನ ಹೇಳಿದ್ದಾರೆ. ಆ ಚರ್ಚೆಯನ್ನು ಮುಂದುವರೆಸುವ ಅವಶ್ಯಕತೆ ಇಲ್ಲ. ಯಾರು ಏನೇ ಹೇಳಿದರೂ ಅದೆಲ್ಲಾ ಮುಗಿದುಹೋದ ಅಧ್ಯಾಯ ಎಂದು ಅವರು ಹೇಳಿದ್ದಾರೆ.ಮುಖ್ಯಮಂತ್ರಿ ಬದಲಾವಣೆಯಂಥ ವಿಚಾರಗಳೆಲ್ಲವೂ ಹೈಕಮಾಂಡ್ ಹಾಗೂ ಪಕ್ಷದ ಪ್ರಮುಖರು ತೀರ್ಮಾನ ಮಾಡುವ ವಿಷಯ. ಈ ಬಗ್ಗೆ ಯಾರೂ ಹಾದಿ ಬೀದಿಯಲ್ಲಿ ಚರ್ಚೆ ಮಾಡಲು ಆಗಲ್ಲ. ಅಷ್ಟೇ ಅಲ್ಲದೆ, ಸಭೆ ಸಮಾರಂಭಗಳಲ್ಲಿ, ವೈಯಕ್ತಿಕವಾಗಿ ಹೇಳಿದರೆ ಅದಕ್ಕೆಲ್ಲಾ ಮಹತ್ವ ಇಲ್ಲ. ಅದೆಲ್ಲವೂ ಪಕ್ಷದ ವೇದಿಕೆಯಲ್ಲೆ ಚರ್ಚೆ ಆಗಬೇಕು ಎಂದು ತಿಳಿಸಿದರು.