ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆಯುತ್ತಿದ್ದ ಅಕ್ಷಯ್ ಕುಮಾರ್ ಸದ್ಯ ಸೈಲೆಂಟ್ ಆಗಿದ್ದಾರೆ. ಅಕ್ಕಿ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲುತ್ತಿವೆ. ಅಕ್ಷಯ್ ಕುಮಾರ್ ಸಿನಿಮಾಗೆ ಬಂಡವಾಳ ಹೂಡಿದ ನಿರ್ಮಾಪಕರು ಹಾಕಿದ ಹಣವು ಬರದೆ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಈ ಮಧ್ಯೆ ಅಕ್ಷಯ್ ಕುಮಾರ್ ತಮ್ಮ ಸಿನಿಮಾಗೆ ಬಂಡವಾಳ ಹೂಡಿ ಹಣ ಕಳೆದುಕೊಂಡಿದ್ದ ನಿರ್ಮಾಪಕರ ಸಹಾಯಕ್ಕೆ ನಿಂತಿದ್ದಾರೆ.
ಇತ್ತೀಚೆಗೆ ಅಕ್ಷಯ್ ಕುಮಾರ್ ನಟನೆಯ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗೆ ಬಾಲಿವುಡ್ ನಿರ್ಮಾಪಕರಾದ ವಶು ಭಗ್ನಾನಿ ಹಾಗೂ ಜಾಕಿ ಭಗ್ನಾನಿ ಅವರು ಬಂಡವಾಳ ಹೂಡಿದ್ದರು. ಆದರೆ ಬಾಕ್ಸ್ ಆಫೀಸ್ನಲ್ಲಿ ಆ ಸಿನಿಮಾ ಮುಗ್ಗರಿಸಿತು. ಅದರ ಪರಿಣಾಮವಾಗಿ ನಿರ್ಮಾಪಕರಿಗೆ ಭಾರಿ ನಷ್ಟ ಆಯಿತು. ಈಗ ಅವರ ಸಹಾಯಕ್ಕೆ ಅಕ್ಷಯ್ ಕುಮಾರ್ ನಿಂತಿದ್ದಾರೆ. ‘ನನ್ನ ಸಂಭಾವನೆಯನ್ನು ತಡವಾಗಿ ಕೊಡಿ ಪರವಾಗಿಲ್ಲ’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಸುಮಾರು 300 ಕೋಟಿ ರೂಪಾಯಿ ಬಜೆಟ್ನಲ್ಲಿ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ನಿರ್ಮಾಣ ಆಗಿತ್ತು. ಆದರೆ ಗಲ್ಲಾಪಟ್ಟೆಗೆಯಲ್ಲಿ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಆಗಲಿಲ್ಲ. ಆದ್ದರಿಂದ ಈ ಸಿನಿಮಾಗೆ ಕೆಲಸ ಮಾಡಿದ ಅನೇಕರಿಗೆ ನಿರ್ಮಾಪಕರು ಸಂಬಳ ನೀಡಿಲ್ಲ. ಇದು ದೊಡ್ಡ ವಿವಾದ ಸೃಷ್ಟಿ ಮಾಡಿತ್ತು. ಈಗ ಅಕ್ಷಯ್ ಕುಮಾರ್ ಅವರು ನಿರ್ಮಾಪಕರನ್ನು ಭೇಟಿ ಆಗಿದ್ದಾರೆ. ಆ ಬಗ್ಗೆ ಜಾಕಿ ಭಗ್ನಾನಿ ಮಾತನಾಡಿದ್ದಾರೆ.
‘ಈ ವಿಚಾರ ಮಾತನಾಡಲು ಅಕ್ಷಯ್ ಸರ್ ಇತ್ತೀಚೆಗೆ ಭೇಟಿ ಆಗಿದ್ದರು. ಚಿತ್ರತಂಡದವರಿಗೆ ಸಹಾಯ ಮಾಡಲು ಅವರು ಮುಂದೆ ಬಂದಿದ್ದಾರೆ. ಸಿನಿಮಾಗಾಗಿ ಕೆಲಸ ಮಾಡಿದ ಎಲ್ಲರಿಗೂ ಸಂಬಳ ನೀಡುವ ತನಕ ತಮ್ಮ ಸಂಭಾವನೆಯನ್ನು ನೀಡುವುದು ಬೇಡ ಅಂತ ಅವರು ಹೇಳಿದ್ದಾರೆ. ನಮ್ಮ ಸಂದರ್ಭವನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಅಕ್ಷಯ್ ಕುಮಾರ್ ಅವರಿಗೆ ಧನ್ಯವಾದಗಳು’ ಎಂದು ಜಾಕಿ ಭಗ್ನಾನಿ ಹೇಳಿದ್ದಾರೆ.
‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಮಾತ್ರವಲ್ಲದೇ, ಅಕ್ಷಯ್ ಕುಮಾರ್ ನಟನೆಯ ‘ಮಿಷನ್ ರಾಣಿಗಂಜ್’, ‘ಕಟ್ಪುಟ್ಲಿ’, ‘ಬೆಲ್ ಬಾಟಂ’ ಸಿನಿಮಾಗಳಿಗೂ ವಶು ಭಗ್ನಾನಿ, ಜಾಕಿ ಭಗ್ನಾನಿ ಅವರು ಹಣ ಹೂಡಿದ್ದರು. ಆ ಸಿನಿಮಾಗಳಿಂದಲೂ ಅವರಿಗೆ ನಷ್ಟ ಆಯಿತು. ಇದರಿಂದಾಗಿ ಅವರು ಮುಂಬೈನಲ್ಲಿ ಇರುವ ಆಸ್ತಿ ಮಾರಾಟ ಮಾಡಿಕೊಂಡರು. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ಕೆಲಸ ಕಳೆದುಕೊಂಡಿದ್ದರು. ಇದೀಗ ಅಕ್ಷಯ್ ಸಹಾಯ ಮಾಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.