ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಭಾಷಣದಲ್ಲಿ ಅಗ್ನಿವೀರ್, ಪರೀಕ್ಷಾ ಅಕ್ರಮ, ಹೊಸ ಅಪರಾಧ ಕಾನೂನು ಜಾರಿ ಸೇರಿ ಇತ್ತಿಚಿನ ಬೆಳವಣಿಗೆಯಲ್ಲಿ ಸರ್ಕಾರದ ನಡೆಯನ್ನು ಸಮರ್ಥಿಸುವ ಜೊತೆ ಜೊತೆಗೆ ವಿರೋಧ ಪಕ್ಷಗಳ ನಾಯಕರ ಟೀಕೆಗೆ ಅವರು ಉತ್ತರ ನೀಡಲಿದ್ದಾರೆ.
ವಿಪಕ್ಷ ನಾಯಕ ರಾಹುಲ್ ಗಾಂಧಿ ಮೋದಿ ಬಿಜೆಪಿ, ಆರ್ಎಸ್ಎಸ್ ಗುರಿಯಾಗಿಸಿ ಭಾಷಣ ಮಾಡಿದ್ದರು. ಅಷ್ಟೇ ಅಲ್ಲದೇ ಹಿಂದೂ ಹೇಳಿಕೊಳ್ಳುವವರಿಂದ ಹಿಂಸಾಚಾರ ಎಂದು ಹೇಳಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ರಾಹುಲ್ ಭಾಷಣದ ಮಧ್ಯೆ ಪ್ರಧಾನಿ ಎದ್ದು ನಿಂತು ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಮೋದಿ ಅವರು ಈ ಎಲ್ಲಾ ವಿಚಾರಗಳನ್ನು ಪ್ರಸ್ತಾಪ ಮಾಡಿ ಇಂದು ತಿರುಗೇಟು ನೀಡುವ ಸಾಧ್ಯತೆಯಿದೆ.
ಸದನದಲ್ಲಿ ಮಾತನಾಡುವ ಮೊದಲು ಇಂದು ಬೆಳಗ್ಗೆ 9:30ಕ್ಕೆ ಪ್ರಧಾನಿನರೇಂದ್ರ ಮೋದಿ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಎನ್ಡಿಎ ಸಂಸದೀಯ ಪಕ್ಷದ ಸಭೆ ಕರೆದಿದ್ದು ಸಭೆ ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.