ಕೆಲವು ಆಹಾರ ಸೇವನೆಯಿಂದ ಮಿದುಳಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಆಗುತ್ತವೆ. ಅವು ಏಕಾಗ್ರತೆಯನ್ನೂ ಕ್ಷೀಣಿಸುವಂತೆ ಮಾಡಬಲ್ಲವು. ಬನ್ನಿ, ಯಾವೆಲ್ಲ ಆಹಾರಗಳು ಏಕಾಗ್ರತಾ ಶಕ್ತಿಯನ್ನೇ ಮೊಡಕುಗೊಳಿಸುತ್ತವೆ ಎಂಬುದನ್ನು ನೋಡೋಣ.
ಪೇಸ್ಟ್ರಿ, ಕೇಕ್, ವೈಟ್ ಬ್ರೆಡ್: ಕೇಕ್, ಪೇಸ್ಟ್ರಿಗಳು ಹಾಗೂ ಬ್ರೆಡ್ನಿಂದ ಮಾಡಿದ ಸ್ಯಾಂಡ್ವಿಚ್, ಬರ್ಗರ್, ಡೋನಟ್ ಇತ್ಯಾದಿಗಳೆಲ್ಲವೂ ಬಾಯಲ್ಲಿ ನೀರೂರುಸಬಹುದು. ನಿಮ್ಮ ಸಂಭ್ರಮವನ್ನು ಹೆಚ್ಚಿಸಬಹುದು. ಮಕ್ಕಳು ಇವಿದ್ದರೆ ಊಟ ಬಿಡಬಹುದು. ಆದರೆ, ಇವು ಅತಿಯಾದರೆ ಒಳ್ಳೆಯದಲ್ಲ. ಇವು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಏರುಪೇರುಗೊಳಿಸುವ ಜೊತೆಗೆ ಮಿದುಳಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು.
ಹೆಚ್ಚು ಉಪು ಒಳ್ಳೆಯದಲ್ಲ. ಹೆಚ್ಚು ಉಪ್ಪಿನ ಸೇವನೆಯಿಂದ ಮಿದುಳಿನ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತದೆ. ಹೆಚ್ಚು ಉಪ್ಪಿನಿಂದ ಕೆಲವೊಮ್ಮೆ ಮಿದುಳಿನಲ್ಲಿ ಉರಿಯೂತವೂ ಆಗಬಹುದು. ಸ್ಮರಣಶಕ್ತಿ ಕುಂಠಿತಗೊಳ್ಳುವುದು, ಏಕಾಗ್ರತೆಗೆ ಧಕ್ಕೆಯುಂಟಾಗುವುದು ಇತ್ಯಾದಿಗಳೂ ಆಗುವ ಸಂಭವ ಹೆಚ್ಚು
ಹೆಚ್ಚಿನ ಮಂದಿಗೆ ತಂಪಾದ ಸೋಢಾ, ಹಾಗೂ ಕಾರ್ಬೋನೇಟೆಡ್ ಡ್ರಿಂಕ್ಗಳನ್ನು ಸೇವಿಸುವುದರಿಂದ ಖುಷಿ, ಉಲ್ಲಾಸ ಸಿಗುತ್ತದೆ. ಆದರೆ, ಇವುಗಳ ಸೇವನೆಯಿಂದ ದಿಢೀರ್ ಸಕ್ಕರೆಯ ಅಂಶ ದೇಹದಲ್ಲಿ ಹೆಚ್ಚುತ್ತದೆ. ಸಿಹಿತಿನಿಸು, ಹಾಗೂ ಸಿಹಿಯಾದ ಡ್ರಿಂಕ್ಗಳನ್ನು ಕುಡಿಯುವುದರಿಂದಲೂ
ಇದೇ ಆಗಬಹುದು. ಇಂತಹ ಸಿಹಿಯಿಂದ ಸಿಗುವ ಖುಷಿಗೆ ಒಗ್ಗಿಕೊಂಡ ಮನಸ್ಸು ದೇಹ ಹಲವು ಅಡ್ಡ ಪರಿಣಾಮಗಳನ್ನೂ ಕಾಣುತ್ತದೆ. ಮಾನಸಿಕವಾಗಿ ಒತ್ತಡ, ಖಿನ್ನತೆ, ಪಾರ್ಶ್ವವಾಯು, ಏಕಾಗ್ರತೆಯಲ್ಲಿ ಸಮಸ್ಯೆ ಇತ್ಯಾದಿಗಳಿಗೂ ಕಾರಣವಾಗಬಹುದು
ಕಾಫಿ ಕುಡಿಯುವುದರಿಂದ ಅದರಲ್ಲಿರುವ ಕೆಫಿನ್ನಿಂದಾಗಿ ನಿಮಗೆ ಶಕ್ತಿ ಇಮ್ಮಡಿಯಾಗಿ ಕೆಲಸದಲ್ಲಿ ಚುರುಕುತನ ಕಾಣಬಹುದು. ಆದರೆ, ಇದು ತಾತ್ಕಾಲಿಕ. ಆದರೆ ಇವು ಉದ್ವೇಗವನ್ನೂ ಹೆಚ್ಚು ಮಾಡುತ್ತದೆ. ಕೆಲವು ಮಂದಿಗೆ ಇದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ನಿದ್ದೆಯ ಸಮಸ್ಯೆ, ಒಂದೆಡೆ ಕೂರಲು ಸಾಧ್ಯವಾಗದಿರುವಂಥ ಏಕಾಗ್ರತೆಯ ಕೊರತೆ ಇತ್ಯಾದಿಗಳೂ ಕಾಣಿಸಿಕೊಳ್ಳಬಹುದು