ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಮನೆ ಮೇಲೆ ನಡೆದ ಗುಂಡಿನ ದಾಳಿ ಇಡೀ ಮುಂಬೈ ನಗರವನ್ನು ಬೆಚ್ಚಿ ಬೀಳಿಸಿತ್ತು. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಂತೆ ಸಲ್ಮಾನ್ ಖಾನ್ ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಮಧ್ಯೆ ಸಲ್ಮಾನ್ ಖಾನ್ ಹತ್ಯೆಗೆ 25 ಲಕ್ಷ ರೂಪಾಯಿಗೆ ಸೂಪಾರಿ ನೀಡಲಾಗಿದ್ದು ಪಾಕಿಸ್ತಾನದಿಂದ ಎಕೆ 47 ಗನ್ ಬಂದಿತ್ತು ಎಂಬುದು ಬಯಲಾಗಿದೆ.
ಸಲ್ಮಾನ್ ಖಾನ್ ಕೊಲೆ ಯತ್ನದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ಕೈಗೆ ಹಲವು ಸಾಕ್ಷ್ಯಗಳು ಸಿಕ್ಕಿದೆ. ಈ ಪ್ರಕರಣದಲ್ಲಿ ಬಂಧಿತರಾದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಐವರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಬಿಷ್ಣೋಯ್ ಗ್ಯಾಂಗ್ 25 ಲಕ್ಷ ರೂ ಸುಪಾರಿ ತೆಗೆದುಕೊಂಡಿರುವುದಾಗಿ ಆರೋಪಿಗಳು ಪೊಲೀಸರ ಎದುರು ಬಾಯ್ಬಿಟ್ಟಿದ್ದಾರೆ.
ಆರೋಪಿಗಳು ಪಾಕಿಸ್ತಾನದಿಂದ ಎಕೆ 47, ಎಕೆ 92 ಮತ್ತು ಎಂ 16 ನಂತಹ ಆಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ರು ಎನ್ನಲಾಗ್ತಿದೆ. 2023ರ ಆಗಸ್ಟ್ ಮತ್ತು 2024ರ ಏಪ್ರಿಲ್ ನಡುವೆ ಕೊಲೆಗೆ ಯೋಜನೆ ರೂಪಿಸಲಾಗಿತ್ತು. ಸುಮಾರು 60 ರಿಂದ 70 ಜನರು ಸಲ್ಮಾನ್ ಖಾನ್ ಅವರ ಪ್ರತಿಯೊಂದು ನಡೆಯನ್ನ ಗಮನಿಸುತ್ತಿದ್ದಾರೆ. ಮುಂಬೈನ ಮನೆ, ಪನ್ವೇಲ್ನ ಫಾರ್ಮ್ ಹೌಸ್ ಮತ್ತು ಗೋರೆಗಾಂವ್ ನ ಫಿಲ್ಮ್ ಸಿಟಿಯಲ್ಲಿ ಸಲ್ಮಾನ್ ಖಾನ್ ಅವರ ಪ್ರತಿಯೊಂದು ನಡೆಯನ್ನೂ ದುಷ್ಕರ್ಮಿ ಗಮನಿಸುತ್ತಿದ್ದರು ಎಂದು ಎಂದು ಪೊಲೀಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.