ಶುಕ್ರವಾರ ಬಂತು ಅಂದರೆ ಗಾಂಧಿನಗರದಲ್ಲಿ ಸಂಭ್ರಮ ಶುರುವಾಗುತ್ತೆ. ಸಿನಿಮಾಗಳು ತೆರೆಗೆ ಬರುತ್ತೆ. ಹೊಸ ಹೊಸ ಪ್ರತಿಭೆಗಳು ಚಿತ್ರಗಳು ಒಂದು ಕಡೆಯಾದರೆ ಸ್ಟಾರ್ ನಟರ ಸಿನಿಮಾಗಳು ಮತ್ತೊಂದು ಕಡೆ ಬಿಡುಗಡೆ ಆಗುತ್ತವೆ. ಅಂಥದ್ದೇ ಹೊಸ ಪ್ರತಿಭೆಗಳ ಕಾಗದ ಸಿನಿಮಾ ಇದೇ ಶುಕ್ರವಾರ (ಜು.5) ತೆರೆಗೆ ಬರಲು ಸಜ್ಜಾಗಿದೆ.
2005ರ ಸಂದರ್ಭದ ಕಹಾನಿಯೂ ಈ ಸಿನಿಮಾದಲ್ಲಿದೆ. ಹೊಸ ನಟ ಆದಿತ್ಯ ಹಾಗೂ ಬಾಲನಟಿಯಾಗಿ ಗುರುತಿಸಿಕೊಂಡ ಅಂಕಿತಾ ಜಯರಾಂ ‘ಕಾಗದ’ ಸಿನಿಮಾದ ಮೂಲಕ ಬಿಗ್ ಸ್ಕ್ರೀನ್ ಗೆ ಎಂಟ್ರಿಕೊಡ್ತಿದ್ದಾರೆ.
ಎರಡು ಹಳ್ಳಿಗಳ ನಡುವಿನ ವೈಷಮ್ಯದ ಮಧ್ಯೆಯೂ ಅರಳಿದ ಪ್ರೇಮಕಥೆ ‘ಕಾಗದ’ ಸಿನಿಮಾದಲ್ಲಿ ಇರಲಿದೆ. ಆದಿತ್ಯ ಹಾಗೂ ಅಂಕಿತಾ ಜೊತೆ ನಟಿ ನೇಹಾ ಪಾಟೀಲ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಬಲ ರಾಜ್ವಾಡಿ, ಮಠ ಕೊಪ್ಪಳ, ನೀನಾಸಂ ಅಶ್ವತ್ಥ್, ಶಿವಮಂಜು ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‘ಅಭಿನಯ ಕಲಿತು, ಕಿರುಚಿತ್ರ ಮತ್ತು ನಾಟಕಗಳಲ್ಲಿ ನಟಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಸಿನಿಮಾ’ ಎಂದು ಆದಿತ್ಯ ಹೇಳಿದ್ದಾರೆ.
ಚಿತ್ರದಲ್ಲಿ 4 ಹಾಡುಗಳಿದ್ದು, ಪ್ರದೀಪ್ ವರ್ಮಾ ಸಂಗೀತ ನಿರ್ದೇಶನ ಮಾಡಿದ್ದಾರೆ. ವೀನಸ್ ನಾಗರಾಜ್ ಮೂರ್ತಿ ಅವರ ಛಾಯಾಗ್ರಹಣ ಈ ಸಿನಿಮಾಗೆ ಇದೆ. ಪವನ್ ಗೌಡ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ‘ಕಾಗದ’ ಸಿನಿಮಾದ ಟ್ರೇಲರ್ ನೋಡಿದ ರಮೇಶ್ ಅರವಿಂದ್, ಧ್ರುವ ಸರ್ಜಾ, ಅನು ಪ್ರಭಾಕರ್, ಎ.ಪಿ. ಅರ್ಜುನ್ ಮುಂತಾದವರು ಮೆಚ್ಚುಗೆ ಸೂಚಿಸಿದ್ದಾರೆ. ಜಂಕಾರ್ ಮ್ಯೂಸಿಕ್ನಲ್ಲಿ ಈ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆ ಆಗಿವೆ.
ನಿರ್ಮಾಪಕ ಅರುಣ್ ಕುಮಾರ್ ಅವರು ಈ ಮೊದಲು ‘ರಗಡ್’ ಸಿನಿಮಾ ನಿರ್ಮಿಸಿದ್ದರು. ಈಗ ಮಗನಿಗಾಗಿ ‘ಕಾಗದ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಈ ಸಿನಿಮಾದಲ್ಲಿ ಯಾವುದೇ ಧರ್ಮದ ಭಾವನೆಗಳಿಗ ಧಕ್ಕೆ ಉಂಟುಮಾಡುವ ದೃಶ್ಯಗಳನ್ನು ನಾವು ತೋರಿಸಿಲ್ಲ. ಮನುಷ್ಯತ್ವವೇ ಎಲ್ಲಕ್ಕಿಂತ ಮುಖ್ಯ ಎನ್ನುವ ಸಂದೇಶ ನೀಡಿದ್ದೇವೆ. ನನ್ನ ಮಗ ಆದಿತ್ಯ ಈ ಸಿನಿಮಾದ ಮೂಲಕ ಹೀರೋ ಆಗಿ ಪರಿಚಯಗೊಳ್ಳುತ್ತಿದ್ದಾನೆ’ ಎಂದು ನಿರ್ಮಾಪಕ ಅರುಣ್ ಕುಮಾರ್ ತಿಳಿಸಿದ್ದಾರೆ.