ಬಾಲಿವುಡ್ ಚಿತ್ರರಂಗದ ಸ್ಟಾರ್ ನಟರಲ್ಲಿ ನಟ ಶಾರುಖ್ ಖಾನ್ ಕೂಡ ಒಬ್ಬರು. ಇಂದು ಶಾರುಖ್ ಖಾನ್ ಬಳಿ ಕೋಟ್ಯಾಂರ ರೂಪಾಯಿ ಬೆಲೆ ಬಾಳುವ ಕಾರುಗಳಿವೆ. ಸಾವಿರಾರು ಕೋಟಿ ಆಸ್ತಿ ಇದೆ. ಆದರೆ ಒಂದು ಕಾಲದಲ್ಲಿ ತೆಗೆದುಕೊಂಡ ಕಾರಿಗೆ ಇಎಂಐ ಕಟ್ಟಲಾಗದೆ ಕಾರು ಕಳೆದುಕೊಂಡಿದ್ದರು. ಅಂದಹಾಗೆ ಈ ಘಟನೆಯನ್ನು ಶಾರುಖ್ ಖಾನ್ ಸ್ನೇಹಿತೆ ನಟಿ ಜೂಹಿ ಚಾವ್ಲಾ ಹೇಳಿದ್ದಾರೆ.
ಸಾಮಾನ್ಯ ಕುಟುಂಬದಿಂದ ಬಂದ ಶಾರುಖ್ ಖಾನ್ ಚಿತ್ರರಂಗದಲ್ಲಿ ಹಂತ ಹಂತವಾಗಿ ಬೆಳೆದು ಇಂದು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಶಾರುಖ್ ಖಾನ್ ಅವರನ್ನು ಹತ್ತಿರದಿಂದ ಕಂಡವರಲ್ಲಿ ಚೂಹಿ ಚಾವ್ಲಾ ಕೂಡ ಪ್ರಮುಖರು. ಸಿನಿಮಾಗಳಲ್ಲಿ ಅವರು ಜೋಡಿಯಾಗಿ ನಟಿಸಿದ್ದಾರೆ. ಅಲ್ಲದೇ ಬಿಸ್ನೆಸ್ ಪಾರ್ಟ್ನರ್ ಕೂಡ ಹೌದು. ಕೊಲ್ಕತ್ತ ನೈಟ್ ರೈಡರ್ಸ್ ತಂಡದ ಮಾಲಿಕತ್ವವನ್ನು ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಹೊಂದಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜೂಹಿ ಚಾವ್ಲಾ ಅವರು ಹಳೇ ದಿನಗಳ ಬಗ್ಗೆ ಮಾತನಾಡಿದ್ದಾರೆ.
‘ಶಾರುಖ್ ಖಾನ್ ಬಳಿ ಕಪ್ಪು ಬಣ್ಣದ ಒಂದು ಜಿಪ್ಸಿ ಇತ್ತು. ಅದರ ಇಎಂಐ ಕಟ್ಟಲಿಲ್ಲ ಎಂಬ ಕಾರಣಕ್ಕೆ ಒಂದು ದಿನ ಅದನ್ನು ಸೀಜ್ ಮಾಡಿದರು. ಆ ದಿನ ಶಾರುಖ್ ಖಾನ್ ತುಂಬ ಬೇಸರದಲ್ಲಿ ಶೂಟಿಂಗ್ಗೆ ಬಂದರು. ಚಿಂತೆ ಮಾಡಬೇಡಿ, ನೀವು ಒಂದು ದಿನ ಹಲವು ಕಾರುಗಳನ್ನು ಖರೀದಿಸುತ್ತೀರಿ ಅಂತ ನಾನು ಅವರಿಗೆ ಸಮಾಧಾನ ಮಾಡಿದ್ದೆ. ಅದನ್ನು ಅವರು ಈಗಲೂ ನೆನಪಿಟ್ಟುಕೊಂಡಿದ್ದಾರೆ. ಅದು ನಿಜ ಕೂಡ. ಈಗ ಅವರು ಹೇಗಿದ್ದಾರೆ ನೋಡಿ’ ಎಂದು ಜೂಹಿ ಚಾವ್ಲಾ ಹೇಳಿದ್ದಾರೆ.
2015ರಲ್ಲಿ ಇದೇ ವಿಚಾರದ ಬಗ್ಗೆ ನಟ ಶಾರುಖ್ ಖಾನ್ವರು ಕೂಡ ಟಿವಿ ಚಾನೆಲ್ವೊಂದರಲ್ಲಿ ಹೇಳಿದ್ದರು. ತಾನು ಖರೀದಿಸಿದ ಮೊದಲ ಕಾರಿಗೆ ಇಎಂಐ ಕಟ್ಟಲು ಆಗದ ಕಾರಣ ಬ್ಯಾಂಕಿನವರು ತೆಗೆದುಕೊಂಡು ಹೋಗಿದ್ದರು. ಆಗ ನಟಿ ಜೂಹಿ ಚಾವ್ಲಾ ತಮ್ಮ ಕಾರನ್ನು ನೀಡಿರುವುದಾಗಿ ಹೇಳಿದ್ದರು. ಮತ್ತು ಕೆಲವೊಮ್ಮೆ ನಟ ಜಾಕಿಶ್ರಾಫ್ ಅವರ ಕಾರಿನಲ್ಲಿ ಓಡಾಡುತ್ತಿದ್ದೆ ಎಂದು ತಿಳಿಸಿದ್ದರು.
ಆರಂಭದಲ್ಲಿ ಶಾರುಖ್ ಖಾನ್ ಅವರಿಗೆ ಮುಂಬೈನಲ್ಲಿ ಸ್ವಂತ ಮನೆ ಇರಲಿಲ್ಲ ಎಂಬುದನ್ನು ಜೂಹಿ ಚಾವ್ಲಾ ಹೇಳಿದ್ದಾರೆ. ‘ಶಾರುಖ್ ಖಾನ್ ಅವರಿಗೆ ಮುಂಬೈನಲ್ಲಿ ಮನೆ ಇಲ್ಲದ ಆ ದಿನಗಳು ಕೂಡ ನನಗೆ ನೆನಪಿದೆ. ಶೂಟಿಂಗ್ಗಾಗಿ ದೆಹಲಿಯಿಂದ ಬರುತ್ತಿದ್ದ ಅವರು ಮುಂಬೈನಲ್ಲಿ ಎಲ್ಲಿ ಉಳಿದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಊಟ, ತಿಂಡಿ ಶೂಟಿಂಗ್ ಸೆಟ್ನಲ್ಲಿ ಮಾಡುತ್ತಿದ್ದರು. 2-3 ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.