ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಮದುವೆ ಸುದ್ದಿ ಗಾಂಧಿನಗರದಲ್ಲಿ ಜೋರಾಗಿಯೇ ಕೇಳಿ ಬರ್ತಿದೆ. ತರುಣ್ ನಟಿ ಸೋನಾಲ್ ಮಂಥೆರೋ ಅವರನ್ನು ವಿವಾಹವಾಗುತ್ತಿದ್ದಾರೆ ಎಂಬ ಗುಸು ಗುಸು ಕೇಳಿ ಬರ್ತಿದೆ. ಇದೀಗ ಈ ಬಗ್ಗೆ ತರುಣ್ ತಾಯಿ ಮಾಲತಿ ಸುಧೀರ್ ಸ್ಪಷ್ಟನೆ ನೀಡಿದ್ದಾರೆ.
ತರುಣ್ ಸುಧೀರ್ – ಸೋನಾಲ್ ಮಂಥೆರೊ ಮದುವೆ ಬಗ್ಗೆ ಗಾಸಿಪ್ ಕೇಳಿ ಬಂದಿದೆ ಎಂದು ಈ ಹಿಂದೆ ನಟಿಯನ್ನು ಪ್ರಶ್ನೆ ಮಾಡಿದ್ದಕ್ಕೆ ‘’ಇದು ವದಂತಿ ಅಷ್ಟೇ’’ ಅಂತ್ಹೇಳಿ ಸೋನಾಲ್ ಮಂಥೆರೊ ನಾಚಿ ನೀರಾಗಿದ್ದರು. ಇದೀಗ ಇದೇ ಗುಸುಗುಸು ಬಗ್ಗೆ ತರುಣ್ ಸುಧೀರ್ ತಾಯಿ ಮಾಲತಿ ಸುಧೀರ್ ಕ್ಲಾರಿಟಿ ಕೊಟ್ಟಿದ್ದಾರೆ.
‘’ಮಗನ ಮದುವೆ ಆಗುತ್ತೆ. ಡೇಟ್ ಇನ್ನೂ ಕನ್ಫರ್ಮ್ ಆಗಿಲ್ಲ’’ ಎಂದು ಮಾಧ್ಯಮಗಳಿಗೆ ಮಾಲತಿ ಸುಧೀರ್ ತಿಳಿಸಿದ್ದಾರೆ. ಆ ಮೂಲಕ ತರುಣ್ ಸುಧೀರ್ ಮದುವೆ ಸುದ್ದಿಯನ್ನ ತಾಯಿ ಮಾಲತಿ ಸುಧೀರ್ ಕನ್ಫರ್ಮ್ ಮಾಡಿದ್ದಾರೆ.
‘’ಹುಡುಗಿಯನ್ನ ಹುಡುಕುತ್ತಾ ಇದ್ದೀನಿ’’ ಎಂದ ಮಾಲತಿ ಸುಧೀರ್ ಅವರಿಗೆ ಸೋನಾಲ್ ಮಂಥೆರೊ ಬಗ್ಗೆ ಕೇಳಿದಾಗ, ‘’ಅವರ (ಸೋನಾಲ್ ಮಂಥೆರೊ) ರಿಲೇಶನ್ಸ್ ಇನ್ನೂ ದುಬೈನಿಂದ ಬರಬೇಕು. ಎಲ್ಲರೂ ಇನ್ನೂ ಮಾತಾಡಬೇಕು. ಎಲ್ಲಾ ಆದ್ಮೇಲೆ ಫೈನಲ್ ಆಗೋದು’’ ಎಂದಿದ್ದಾರೆ.
‘’ಈಗ ಆಷಾಢ ಬಂತು. ಈಗ ಮಾತಾಡಲು ಆಗಲ್ಲ. ಆಷಾಢ ಮುಗಿದ್ಮೇಲೆ ಮಾತುಕತೆ ಮಾಡಬೇಕು’’ ಅಂತಲೂ ಮಾಲತಿ ಸುಧೀರ್ ಹೇಳಿದ್ದಾರೆ. ಅಲ್ಲಿಗೆ, ತರುಣ್ ಸುಧೀರ್ – ಸೋನಾಲ್ ಮಂಥೆರೊ ಮದುವೆ ಮಾತುಕತೆ ಗಾಸಿಪ್ ನಿಜ ಎಂದ ಹಾಗಾಯಿತು.
‘’ನಾನಿರುವಾಗಲೇ ಮಗನಿಗೆ ಮದುವೆ ಆಗಬೇಕು ಎಂಬುದು ನನ್ನ ಆಸೆ’’ ಎಂದಿರುವ ಮಾಲತಿ ಸುಧೀರ್, ‘’ಆಗಸ್ಟ್ನಲ್ಲಿ ಮದುವೆ ಅನ್ನೋದು ಸುಳ್ಳು. ಡೇಟ್ ಇನ್ನೂ ಫಿಕ್ಸ್ ಆಗಿಲ್ಲ. ಇನ್ನೂ ಅವನ ಮದುವೆಗೆ ಟೈಮ್ ಕೂಡಿ ಬಂದಿಲ್ಲ. ದಾರಿಯಲ್ಲಿ ಹೋಗೋರನ್ನ ಕರೆದುಕೊಂಡು ಬಂದು ‘ನನಗೆ ಇಷ್ಟ’ ಅಂದರೂ ನಾನು ಮದುವೆ ಮಾಡ್ತೀನಿ’’ ಎಂದು ಹೇಳಿದ್ದಾರೆ.