ಪಾಕಿಸ್ತಾನಿ ಖ್ಯಾತ ನಟ ಫವಾದ್ ಖಾನ್ ಗೆ ಮತ್ತೆ ಹಿಂದಿ ಚಿತ್ರರಂಗದಿಂದ ಆಫರ್ ಹೋಗಿದೆ. ಕಳೆದ ಒಂದಷ್ಟು ವರ್ಷಗಳಿಂದ ಅವರನ್ನು ಸಿನಿಮಾಗಳಿಂದ ಬ್ಯಾನ್ ಮಾಡಲಾಗಿತ್ತು. ಫವಾದ್ ಮಾತ್ರವಲ್ಲದೇ ಪಾಕಿಸ್ತಾನದ ಎಲ್ಲ ಕಲಾವಿದರು, ಗಾಯಕರು, ಸಂಗೀತಗಾರರನ್ನು ಬಾಲಿವುಡ್ ಸಿನಿಮಾಗಳಿಂದ ದೂರವಿಡಲಾಗಿತ್ತು. ಆದರೆ ಈಗ ಫವಾದ್ ಖಾನ್ ಅವರಿಗೆ ಮತ್ತೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಹೊಸ ಸಿನಿಮಾದಲ್ಲಿ ಫವಾದ್ ಖಾನ್ಗೆ ಜೋಡಿಯಾಗಿ ವಾಣಿ ಕಪೂರ್ ಕಾಣಿಸಿಕೊಳ್ತಿದ್ದಾರೆ.
2016ರಲ್ಲಿ ಉರಿ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನದ ಜೊತೆ ಭಾರತದ ಸಂಬಂಧ ಸಂಪೂರ್ಣ ಹದಗೆಟ್ಟಿತು. ಆ ಘಟನೆ ಬಳಿಕ ಪಾಕಿಸ್ತಾನದ ಯಾರೊಂದಿಗೂ ಸಿನಿಮಾ, ಸೀರಿಯಲ್, ಮ್ಯೂಸಿಕ್ ವಿಡಿಯೋ ಇತ್ಯಾದಿ ಮನರಂಜನಾ ಕಾಂಟೆಂಟ್ ಮಾಡಬಾರದು ಎಂದು ಭಾರತದ ನಿರ್ಮಾಪಕರು ನಿರ್ಧರಿಸಿದರು. ‘ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ’ವು ಪಾಕ್ ಮಂದಿಯ ಜೊತೆ ಕೆಲಸ ಮಾಡುವುದಿಲ್ಲ ಎಂದು ಘೋಷಣೆ ಮಾಡಿತ್ತು.
ಬ್ಯಾನ್ ಬಳಿಕ ಪಾಕಿಸ್ತಾನದ ಸೆಲೆಬ್ರಿಟಿಗಳಾದ ಫವಾದ್ ಖಾನ್, ಮಹೀರಾ ಖಾನ್, ಅತೀಫ್ ಅಸ್ಲಂ, ರಾಹತ್ ಫತೇ ಅಲಿ ಖಾನ್ ಮುಂತಾದವರು ಭಾರತದ ಸಿನಿಮಾಗಳಿಂದ ಹೊರಗೆ ಉಳಿದರು. ಆದರೆ ಕಳೆದ ವರ್ಷ ನವೆಂಬರ್ನಲ್ಲಿ ಈ ಬ್ಯಾನ್ ಸೂಕ್ತವಲ್ಲ ಎಂದು ಭಾರತದ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಲಾವಿದರು ಭಾರತದ ಸಿನಿಮಾಗಳಲ್ಲಿ ಮತ್ತೆ ಕೆಲಸ ಮಾಡಲು ಶುರು ಮಾಡಿದ್ದಾರೆ.
ಸದ್ಯ ಫವಾದ್ ಖಾನ್ ಗೆ ಹಿಂದಿ ಸಿನಿಮಾದಿಂದ ಆಫರ್ ಹೋಗಿದ್ದು ಈ ಚಿತ್ರಕ್ಕೆ ವಾಣಿ ಕಪೂರ್ ನಾಯಕಿ ಎಂದು ಮಾತ್ರವೇ ಸುದ್ದಿ ಹೊರ ಬಿದ್ದಿದೆ. ಚಿತ್ರದ ನಿರ್ಮಾಪಕ, ನಿರ್ದೇಶಕ ಯಾರು ಟೈಟಲ್ ಏನು ಎಂಬುದೆಲ್ಲಾ ಸ್ಪಷ್ಟವಾಗಿಲ್ಲ. ಸದ್ಯ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆಯಂತೆ.
2014ರಲ್ಲಿ ‘ಖೂಬ್ಸೂರತ್’ ಸಿನಿಮಾ ಮೂಲಕ ಫವಾದ್ ಖಾನ್ ಅವರು ಬಾಲಿವುಡ್ಗೆ ಕಾಲಿಟ್ಟಿದ್ದರು. ಬಳಿಕ ‘ಕಪೂರ್ ಆ್ಯಂಡ್ ಸನ್ಸ್’, ‘ಏ ದಿಲ್ ಹೈ ಮುಷ್ಕಿಲ್’ ಚಿತ್ರಗಳಲ್ಲಿ ಅವರು ನಟಿಸಿದರು. ಬ್ಯಾನ್ ಕಾರಣದಿಂದ ಕಳೆದ 8 ವರ್ಷಗಳಿಂದ ಅವರಿಗೆ ಬಾಲಿವುಡ್ನಲ್ಲಿ ಯಾವುದೇ ಅವಕಾಶ ಸಿಕ್ಕಿರಲಿಲ್ಲ. ಆದರೆ ಈಗ ಮತ್ತೆ ಹೊಸ ಸಿನಿಮಾಗೆ ಫವಾದ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.