ಉಡುಪಿ : ಜಿಲ್ಲೆಯ ಐತಿಹಾಸಿಕ ಕಮಲಶಿಲೆಯ ಶ್ರೀ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಾಲಯದೊಳಗೆ ಕುಬ್ಜಾ ನದಿ ನೀರು ಪ್ರವೇಶಿಸವಾಗಿದೆ. ವರ್ಷಕ್ಕೊಮ್ಮೆ ನಡೆಯುವ ನೈಸರ್ಗಿಕ ಅಚ್ಚರಿಯಂತೆ ನದಿ ನೀರು ಗರ್ಭಗುಡಿಯೊಳಗೆ ಹರಿದು ದೇವಿಯ ಚರಣ ಸ್ಪರ್ಶ ಮಾಡಿದೆ. ನಸುಕಿನ ನಾಲ್ಕು ಗಂಟೆಯ ಸುಮಾರಿಗೆ ನದಿ ನೀರು ಗರ್ಭಗುಡಿ ಪ್ರವೇಶಿಸುತ್ತಿದ್ದಂತೆಯೇ, ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಸಾಮಾನ್ಯವಾಗಿ, ಮಳೆಗಾಲದ ಸಮಯದ ಒಂದು ದಿನ, ನದಿ ನೀರು ಗರ್ಭಗುಡಿ ಪ್ರವೇಶಿಸಿ ದೇವರ ಚರಣ ಸ್ಪರ್ಷ ಮಾಡುವುದು ತಪ್ಪದೇ ನಡೆಯುತ್ತಿದೆ. ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ವರ್ಷಕ್ಕೊಮ್ಮೆ ದೇವಾಲಯದ ಪಕ್ಕದಲ್ಲೇ ಇರುವ ಕುಬ್ಜಾ ನದಿಯ ನೀರು ಗರ್ಭಗುಡಿಗೆ ಉಕ್ಕಿ ಬರುತ್ತದೆ. ಆಷಾಢ ಅಥವಾ ಶ್ರಾವಣ ಮಾಸದ ಮಳೆಯಲ್ಲಿ ದುರ್ಗಾಪರಮೇಶ್ವರಿಗೆ ನೈಸರ್ಗಿಕ ಪುಣ್ಯಸ್ನಾನ ಆಗುವುದು ಹಿಂದಿನಿಂದಲೂ ಸಂಭವಿಸುತ್ತಿರುವ ನೈಸರ್ಗಿಕ ಅಚ್ಚರಿ.