ಬೆಂಗಳೂರು: ದೊಡ್ಡಬಳ್ಳಾಪುರ – ಚನ್ನಸಂದ್ರ ರೈಲು ನಿಲ್ದಾಣ ಮೇಲ್ದರ್ಜೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ರೈಲ್ವೇ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ (V.Somanna) ಅವರಿಗೆ ಸಂಸದ ಡಾ.ಕೆ ಸುಧಾಕರ್ (Dr.K Sudhakar) ಮನವಿ ಮಾಡಿದ್ದಾರೆ.
ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ ಎಫ್ಎಲ್ಎಸ್ ನಿರ್ಣಾಯಕವಾಗಿದ್ದು, ಕಾರಿಡಾರ್ 1 ಮತ್ತು 4 ರಲ್ಲಿ ಈ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಆದ್ಯತೆ ನೀಡಬೇಕು.
ಇದರಿಂದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.
ಅಮೃತ ಭಾರತ ಯೋಜನೆಯಡಿ ನಡೆಯುತ್ತಿರುವ ದೊಡ್ಡಬಳ್ಳಾಪುರ ಮತ್ತು ಚನ್ನಸಂದ್ರ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಕಾಲಮಿತಿ ಹಾಕಿಕೊಂಡು ಶೀಘ್ರ ಪೂರ್ಣಗೊಳಿಸಬೇಕು. ಹೊಸ ರೈಲು ಮಾರ್ಗ ಯೋಜನೆಗಳಾದ ಚಿಕ್ಕಬಳ್ಳಾಪುರ-ಗೌರಿಬಿದನೂರು (44 ಕಿ.ಮೀ.), ಚಿಕ್ಕಬಳ್ಳಾಪುರ-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ (103 ಕಿ.ಮೀ.), ಶ್ರೀನಿವಾಸಪುರ-ಮದನಪಲ್ಲಿ (75 ಕಿ.ಮೀ.) ಮಾರಿಕುಪ್ಪಂ-ಕುಪ್ಪಂ (23.7 ಕಿ.ಮೀ.) ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು. ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್ 1: ದೇವನಹಳ್ಳಿ-ಯಲಹಂಕ ಮತ್ತು ಕಾರಿಡಾರ್ 4: ರಾಜಾನುಕುಂಟೆ-ಯಲಹಂಕ ಮಾರ್ಗಗಳನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಅವರು ಕೋರಿದ್ದಾರೆ.