ಬೆಂಗಳೂರು: ರಾಜ್ಯದ ಜೀವನದಿ ಕಾವೇರಿ ನದಿಗೆ ಒಳಚರಂಡಿ ನೀರು, ಘನ ತ್ಯಾಜ್ಯ, ಕೈಗಾರಿಕ ತ್ಯಾಜ್ಯ ಹಾಗೂ ಇತರೆ ಸ್ವರೂಪದ ಮಲಿನಕಾರಕಗಳು ಸೇರ್ಪಡೆಗೊಂಡು ನೀರು ಕಲುಷಿತವಾಗಿ ನೈಸರ್ಗಿಕ ಗುಣ ಕಳೆದುಕೊಂಡು ಮಾಲಿನ್ಯ ಉಂಟಾಗುತ್ತಿರುವುದನ್ನು ಹಾಗೂ ಹಾಗೂ ನಾಗರಿಕರು ಮತ್ತು ಜಲಚರಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದರ ಬಗ್ಗೆ ಶಾಸಕರಾದ ದಿನೇಶ್ ಗೂಳಿಗೌಡ ಅವರು ಪತ್ರ ಬರೆದು ಸರ್ಕಾರದ ಗಮನ ಸೆಳೆದ ಬೆನ್ನಲ್ಲೇ ಪೂರಕ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ, ತುರ್ತು ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸಂಬಂಧಪಟ್ಟ ಇಲಾಖೆಗಳ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಿ ಆದೇಶಿಸಿದೆ.
ಕಾವೇರಿ ನದಿ ನೀರು ಕಲುಷಿತಗೊಳ್ಳುತ್ತಿರುವ ಬಗ್ಗೆ ಶಾಸಕರಾದ ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದು ಸಮಸ್ಯೆಯ ತೀವ್ರತೆಯನ್ನು ವಿವರಿಸಿದ್ದರು. ಈಗ ಅವರ ಸೂಚನೆ ಮೇರೆಗೆ ಸಮಿತಿಯನ್ನು ರಚನೆ ಮಾಡಿ ಆದೇಶಿಸಲಾಗಿದೆ.
ಕಾವೇರಿ ನದಿಗೆ ಒಳಚರಂಡಿ ನೀರು, ಘನ ತ್ಯಾಜ್ಯ, ಕೈಗಾರಿಕೆ ತ್ಯಾಜ್ಯ ಹಾಗೂ ಇತರೆ ಸ್ವರೂಪದ ಮಲಿನಕಾರಕಗಳು ಸೇರ್ಪಡೆಗೊಂಡು ನೀರು ಕಲುಷಿತವಾಗಿ ಪರಿಸರಕ್ಕೆ ಆಗಿರುವ ಅನಾಹುತದ ತಡೆಯ ಬಗ್ಗೆ ಪರಿಶೀಲಿಸಿ 10 ದಿನಗಳ ಒಳಗಾಗಿ ವರದಿ ಸಲ್ಲಿಸಲು ರಚಿಸಲಾದ ತಜ್ಞರ ಸಮಿತಿಗೆ ಅರಣ್ಯ ಇಲಾಖೆ ಸೂಚನೆಯನ್ನು ನೀಡಿದೆ.
ಸಮಿತಿಯಲ್ಲಿ ಯಾರಿದ್ದಾರೆ?
1. ನಿರಂಜನ್, ಮುಖ್ಯ ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು – ಅಧ್ಯಕ್ಷರು
2. ಅಧೀಕ್ಷಕ ಅಭಿಯಂತರರು, ಕಾವೇರಿ ನೀರಾವರಿ ನಿಗಮ ನಿಯಮಿತ, ಮೈಸೂರು- ಸದಸ್ಯರು
3. ಅಧೀಕ್ಷಕ ಅಭಿಯಂತರರು, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಮೈಸೂರು – ಸದಸ್ಯರು
4 ಅಧೀಕ್ಷಕ ಅಭಿಯಂತರರು, ಮೈಸೂರು ಮಹಾನಗರ ಪಾಲಿಕೆ – ಸದಸ್ಯರು
5. ವಿಭಾಗ ಮುಖ್ಯಸ್ಥರು(HOD), ಪರಿಸರ ವಿಜ್ಞಾನ ಸದಸ್ಯರು ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾಲಯ ಮಾನಸ ಗಂಗೋತ್ರಿ – ಸದಸ್ಯರು
6. ಡಾ. ಬಿ.ಮನೋಜ್ಕುಮಾರ್, ಪ್ರಾಧ್ಯಾಪಕರು, ಶ್ರೀ ಸದಸ್ಯರು ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜ್ ಆಫ್ ಮೈಸೂರು –
ಸದಸ್ಯರು
7 ಕಾರ್ಯನಿರ್ವಾಹಕ ಅಭಿಯಂತರರು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ, ಮೈಸೂರು – ಸದಸ್ಯರು
8. ಎಂ.ಬಿ.ಪ್ರಕಾಶ್, ನಿವೃತ್ತ ಹಿರಿಯ ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮೈಸೂರು – ಸದಸ್ಯರು
9 ಹಿರಿಯ ಪರಿಸರ ಅಧಿಕಾರಿ, ಪ್ರಾದೇಶಿಕ ಕಛೇರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮೈಸೂರು – ಸದಸ್ಯ ಸಂಯೋಜಕರು
ಈ ಆದೇಶ ತಲುಪಿದ 10 ದಿನಗಳ ಒಳಗಾಗಿ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ದಿನದಂದು ಸಮಿತಿಯ ಕಾರ್ಯಾವಧಿ ಮುಕ್ತಾಯಗೊಳ್ಳುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸಚಿವರು, ಸರ್ಕಾರಕ್ಕೆ ಶಾಸಕರಿಗೆ ಅಭಿನಂದನೆ
ನಮ್ಮ ರಾಜ್ಯ ಸರ್ಕಾರವು ಈ ನೆಲ, ಜಲ, ರೈತರ, ನಾಗರಿಕರ ರಕ್ಷಣೆಗೆ ಸದಾ ಒಂದು ಹೆಜ್ಜೆ ಮುಂದೆ ಇರುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಜೀವನದಿ ಕಾವೇರಿ ಉಳಿವಿಗಾಗಿ ಈಗ ಸಮಿತಿಯನ್ನು ರಚನೆ ಮಾಡಿರುವುದು ಅಭಿನಂದನೀಯ ಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ ಅವರಿಗೆ ಧನ್ಯವಾದಗಳನ್ನು ಹೇಳಬಯಸುತ್ತೇನೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.