ಇಸ್ರೇಲ್ನ ಸೇನಾ ನೆಲೆಗಳ ಮೇಲೆ ಗುರುವಾರ ಸಿಡಿತಲೆಗಳನ್ನು ಒಳಗೊಂಡ 200ಕ್ಕೂ ಹೆಚ್ಚು ರಾಕೆಟ್ಗಳಿಂದ ದಾಳಿ ನಡೆಸಲಾಗಿದೆ ಎಂದು ಲೆಬನಾನ್ನ ಹಿಜ್ಬುಲ್ಲಾ ಸಂಘಟನೆ ತಿಳಿಸಿದೆ.
ಸಂಘಟನೆಯ ಹಿರಿಯ ಸೇನಾ ಕಮಾಂಡರ್ ಮೊಹಮ್ಮದ್ ನಾಮೇಹ್ ನಾಸೀರ್ ಅವರನ್ನು ಇಸ್ರೇಲ್ ಹತ್ಯೆ ಮಾಡಿದ್ದು, ಪ್ರತೀಕಾರದ ಭಾಗವಾಗಿ ದಾಳಿ ನಡೆಸಿದ್ದಾಗಿ ಲೆಬನಾನ್ನ ಹಿಜ್ಬುಲ್ಲಾ ಸಂಘಟನೆ ಹೇಳಿಕೊಂಡಿದೆ.
ಇಸ್ರೇಲ್-ಲೆಬನಾನ್ ಮಧ್ಯೆ ಹಲವು ತಿಂಗಳಿಂದ ಗಡಿ ಬಿಕ್ಕಟ್ಟು ಮುಂದುವರಿದಿದ್ದು, ಇದೇ ಮೊದಲ ಬಾರಿಗೆ ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯು ಇಸ್ರೇಲ್ ಮೇಲೆ ಇಷ್ಟು ದೊಡ್ಡ ಪ್ರಮಾಣದ ದಾಳಿ ನಡೆಸಿದೆ.
‘ಲೆಬನಾನ್ ಕಡೆಯಿಂದ ಹತ್ತಾರು ಕ್ಷಿಪಣಿಗಳು ಇಸ್ರೇಲ್ ಗಡಿಯೊಳಕ್ಕೆ ಪ್ರವೇಶಿಸಿವೆ. ಆದರೆ, ಅವುಗಳ ಪೈಕಿ ಕೆಲವೊಂದು ಕ್ಷಿಪಣಿಗಳನ್ನು ಪ್ರತಿಬಂಧಿಸಲಾಗಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ’ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಇದೇ ವೇಳೆ ಹಿಜ್ಬುಲ್ಲಾ ಸಂಘಟನೆಯ ಮೂರು ವಿಭಾಗಗಳ ಮುಖ್ಯಸ್ಥರ ಪೈಕಿ ಒಬ್ಬರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಒಪ್ಪಿಕೊಂಡಿದೆ. ಕಮಾಂಡರ್ ಹತ್ಯೆಯ ಬಳಿಕ ಸಿಡಿತಲೆಗಳನ್ನು ಒಳಗೊಂಡ ಕತ್ಯುಶಾ ಮತ್ತು ಫಲಕ್ ಹೆಸರಿನ ರಾಕೆಟ್ಗಳನ್ನು ಉತ್ತರ ಇಸ್ರೇಲ್ ಮೇಲೆ ಉಡಾಯಿಸಲಾಗಿತ್ತು. ಹಲವು ಸೇನಾನೆಲೆಗಳನ್ನು ಗುರಿಯಾಗಿಸಿ ಡ್ರೋನ್ಗಳನ್ನು ಕಳುಹಿಸಲಾಗಿದೆ ಎಂದು ಹಿಜ್ಬುಲ್ಲಾ ಮಾಹಿತಿ ನೀಡಿದೆ.