ಹಾಸನ: ಜೆಡಿಎಸ್ನಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರ ಭಾರೀ ಸುದ್ದಿ ಮಾಡುತ್ತಿದೆ. ಒಂದು ಕಡೆ ಎಚ್ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದರೆ, ಇನ್ನೊಂದು ಕಡೆ ಮಾಜಿ ಶಾಸಕ ಪ್ರಕಾಶ್ ಅವರ ಪುತ್ರ ಸ್ವರೂಪ್ ಪ್ರಕಾಶ್ ಕೂಡ ಟಿಕೆಟ್ ಬೇಕು ಎಂದು ಕುಳಿತಿದ್ದಾರೆ.
ಇವರಿಬ್ಬರ ಜಗಳವನ್ನು ಬಗೆಹರಿಸಲು ಮಾಜಿ ಪ್ರಧಾನಿ ದೇವೇಗೌಡರು ಮಾಸ್ಟರ್ ಪ್ಲಾನ್ ರೆಡಿ ಮಾಡಿದ್ದು, ಇಬ್ಬರಿಗೂ ಟಿಕೆಟ್ ನೀಡದೇ ಹೊಸಬರನ್ನು ಹಾಸನದಿಂದ ಅಭ್ಯರ್ಥಿ ಎಂದು ಘೋಷಿಸುವ ಸಾಧ್ಯತೆ ಇದೆ.
ಹಾಸನ ಟಿಕೆಟ್ ವಿಚಾರದಲ್ಲಿ ಜೆಡಿಎಸ್ ಹೊಸ ಸೂತ್ರ ಅನುಸರಿಸಲು ಮುಂದಾಗಿದ್ದು, ಇಬ್ಬರ ಜಗಳ ಮೂರನೇಯವರಿಗೆ ಲಾಭ ಆಗುವ ಸಾಧ್ಯತೆ ಇದೆ. ಭವಾನಿ ರೇವಣ್ಣಗೆ ಟಿಕೆಟ್ ನೀಡಿದರೆ ಸ್ವರೂಪ್ ಅಸಮಾಧಾನಗೊಳ್ಳುವ ಸಾಧ್ಯತೆ ಇದೆ. ಸ್ವರೂಪ್ಗೆ ಟಿಕೆಟ್ ನೀಡಿದರೆ ಭವಾನಿ ರೇವಣ್ಣ ಅವರು ಅಸಮಾಧಾನಗೊಳ್ಳಲಿದ್ದಾರೆ. ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಇಬ್ಬರಿಗೂ ಟಿಕೆಟ್ ನೀಡದೇ ಬೇರೆಯವರಿಗೆ ಟಿಕೆಟ್ ನೀಡಲು ಚಿಂತನೆ ನಡೆದಿದೆ.
ಎಚ್ಡಿ ಕುಮಾರಸ್ವಾಮಿ ಅವರು ಹಾಸನದ ಟಿಕೆಟ್ ಅನ್ನು ಕಾರ್ಯಕರ್ತರಿಗೆ ನೀಡುತ್ತೇವೆ ಎಂದು ಪ್ರತಿ ಬಾರಿಯೂ ಹೇಳುತ್ತಾ ಬಂದಿದ್ದಾರೆ. ಅದರಂತೆ ಹಾಸನದ ಮತ್ತೊಬ್ಬ ಕಾರ್ಯಕರ್ತನನ್ನು ಕಣಕ್ಕೆ ಇಳಿಸಲು ದೇವೇಗೌಡರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೆಡಿಎಸ್ ಮುಖಂಡ ರಾಜೇಗೌಡ ಎಂಬುವವರಿಗೆ ಟಿಕೆಟ್ ನೀಡಲು ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ. ಈ ಮೂಲಕ ಹಾಸನ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.