ಇದು ನಂಬಲು ತುಸು ಕಷ್ಟವಾದ ಸುದ್ದಿಯೇ. ಆದರೆ ನಂಬಲೇ ಬೇಕಿದೆ. ಹೌದು. ಇದೇ ಮೊದಲ ಬಾರಿಗೆ ಕೆಲಸದ ಒತ್ತಡ ತಾಳದೆ ರೊಬೋಟ್ ಒಂದು ಆತ್ಮಹತ್ಯೆಗೆ ಶರಣಾಗುವ ಮೂಲಕ ಅಚ್ಚರಿ ಮೂಡಿಸಿದೆ. ಈ ಘಟನೆ ನಡೆದಿರುವುದು ಸಮಗ್ರ ಸ್ವಯಂಚಾಲಿತ ರೊಬೋಟ್ಗಳನ್ನು ವಿವಿಧ ವೃತ್ತಿಗಳಲ್ಲಿ ಬಳಕೆ ಮಾಡಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕೊರಿಯಾದಲ್ಲಿ.
ನಾಗರಿಕ ಸೇವಾ ರೊಬೋಟ್ ಒಂದು ಇದೇ ಪ್ರಪ್ರಥಮ ಬಾರಿಗೆ ಮೆಟ್ಟಿಲುಗಳ ಮೇಲಿಂದ ತನ್ನನ್ನು ತಾನು ಕೆಳಕ್ಕೆ ದೂಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದೆ ಎಂದು The Daily Mail ಸುದ್ದಿ ಸಂಸ್ಥೆ ವರದಿ ಮಾಡಿದೆ. ಎರಡು ಮೀಟರ್ ಎತ್ತರದಿಂದ ಕೆಳಗೆ ಬಿದ್ದ ನಂತರ ರೊಬೋಟ್ ನಿಷ್ಕ್ರಿಯವಾಗಿದೆ ಎಂದು ಗುಮಿ ಸಿಟಿ ಕೌನ್ಸಿಲ್ ಕೂಡಾ ದೃಢಪಡಿಸಿದೆ. ಕಟ್ಟಡದ ಎರಡು ಮತ್ತು ಮೊದಲ ಮಹಡಿಯ ನಡುವೆ ಕೆಳಕ್ಕೆ ಬಿದ್ದಿರುವ ರೊಬೋಟ್ ತುಂಡುತುಂಡಾಗಿದೆ ಎಂದು ಹೇಳಲಾಗಿದೆ.
ರೊಬೋಟ್ ಆತ್ಮಹತ್ಯೆ ಸುದ್ದಿ ತಿಳಿದ ಗುಮಿ ನಗರದ ಸ್ಥಳೀಯ ನಾಗರಿಕರು ಕಂಬನಿ ಮಿಡಿಯುತ್ತಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿವರಿಸಲಾಗದ ಪತನಕ್ಕೂ ಮುನ್ನ, ಅದೃಶ್ಯ ಉಪಸ್ಥಿತಿಗೆ ಪ್ರತಿಕ್ರಿಯಿಸಿದ ರೊಬೋಟ್, ನಿಂತ ಜಾಗದಲ್ಲೇ ಗಿರಿಗಿಟ್ಟಲೆ ಸುತ್ತಿ, ನಂತರ ಕೆಳಗೆ ಬಿದ್ದಿತು ಎನ್ನಲಾಗಿದೆ. ಈ ಘಟನೆಯ ನಿಖರ ಕಾರಣದ ಕುರಿತು ತನಿಖೆ ಪ್ರಗತಿಯಲ್ಲಿದ್ದು, ರೊಬೋಟ್ನ ಅವಶೇಷಗಳನ್ನು ಅಧಿಕಾರಿಗಳು ಸಂಗ್ರಹಿಸಿ, ಅವನ್ನು ವಿಶ್ಲೇಷಣೆಗೊಳಪಡಿಸಿದ್ದಾರೆ ಎಂದು ವರದಿಯಾಗಿದೆ.