ಬೆಂಗಳೂರು: ಬೆಂಗಳೂರಿನಲ್ಲಿ ಡೆಂಗ್ಯೂ ಭೀತಿ ಹೆಚ್ಚಾಗಿದ್ದು, ಸ್ವಚ್ಛತೆ ಕಾಪಾಡದವರಿಗೆ ದಂಡ ವಿಧಿಸಲು ಬಿಬಿಎಂಪಿ ತೀರ್ಮಾನ ಮಾಡಿದೆ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿರುವುದರಿಂದ, ನೀರು ತುಂಬಿಕೊಳ್ಳುತ್ತಿರುವುದರಿಂದ ಸೊಳ್ಳೆಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಮಧ್ಯೆ, ಖಾಸಗಿ ಮಾಲೀಕತ್ವದ ಜಮೀನುಗಳಲ್ಲಿ, ಮನೆ ಸಮೀಪ ಸ್ವಚ್ಛತೆ ಕಾಪಾಡದವರಿಗೆ ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದೆ.
ಖಾಸಗಿಯವರ ನಿವೇಶನ, ಜಾಗ ಅಥವಾ ಸ್ವತ್ತುಗಳಲ್ಲಿ ಸೊಳ್ಳೆ ಉತ್ಪತ್ತಿ ಕಂಡು ಬಂದಲ್ಲಿ ಮೊದಲಿಗೆ ಎಚ್ಚರಿಕೆ ನೀಡಲಾಗುತ್ತದೆ. ಅದಕ್ಕೆ ಸ್ಪಂದಿಸದಿದ್ದರೆ ಮೊದಲ ಹಂತದಲ್ಲಿ 50 ರೂ. ದಂಡ ವಿಧಿಸಲಾಗುತ್ತದೆ. ನಂತರ ಆ ಸ್ಥಳ ಸ್ವಚ್ಛವಾಗುವ ತನಕ ಪ್ರತಿ ನಿತ್ಯ 15 ರೂ. ದಂಡ ವಿಧಿಸಲು ತೀರ್ಮಾನಿಸಲಾಗಿದೆ. ಕರ್ನಾಟಕ ಮುನ್ಸಿಪಲ್ ಕಾಯ್ದೆ ಪ್ರಕಾರ ಅನೈರ್ಮಲ್ಯಕ್ಕೆ ದಂಡದ ಮೊತ್ತ ಕಡೆಮೆ ಇದೆ. ಇದನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ ಎಂದು ಬಿಬಿಎಂಪಿ ಮೂಲಗಳಿಂದ ಅಧಿಕೃತ ಮಾಹಿತಿ ದೊರೆತಿದೆ.
ಒಂದೆಡೆ ಖಾಸಗಿಯವರಿಗೆ ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದ್ದರೆ ಅತ್ತ ಸಾರ್ವಜನಿಕ ಸ್ಥಳಗಳೇ ಸೊಳ್ಳೆ ಉತ್ಪತ್ತಿಯ ಹಾಟ್ಸ್ಪಾಟ್ಗಳಾಗಿ ಪರಿಣಮಿಸಿರುವುದು ಕಂಡುಬಂದಿದೆ. ನಗರದ ಬಹುತೇಕ ರಸ್ತೆಗಳಲ್ಲಿರುವ ಕಸದ ರಾಶಿ ಇದೀಗ ಸೊಳ್ಳೆಗಳ ಸ್ಪಾಟ್ ಆಗಿ ಬದಲಾಗಿದೆ. ಸಸ್ಯಕಾಶಿ ಲಾಲ್ಬಾಗ್ ಸುತ್ತಮುತ್ತ ಫುಟ್ ಪಾತ್ನಲ್ಲಿ ರಾಶಿ ರಾಶಿ ಕಸ ಬಿದ್ದಿದ್ದು, ಕಸದ ರಾಶಿ ಸೊಳ್ಳೆಗಳ ವಾಸಸ್ಥಾನವಾಗಿರುವುದರಿಂದ ಡೆಂಗ್ಯೂ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.
ವಿಧಾನಸೌಧದ ಕೂಗಳತೆ ದೂರದಲ್ಲಿರುವ ಕೆಆರ್ ಸರ್ಕಲ್ ಬಳಿ ಪಾಲಿಕೆಯೇ ನಿರ್ಮಿಸಿದ್ದ ಕಾರಂಜಿ ಇದೀಗ ಸೊಳ್ಳೆಗಳ ಹಾಟ್ಸ್ಪಾಟ್ ಆಗಿ ಬದಲಾಗಿದೆ. ಮಳೆ ನೀರು ನಿಂತಿರುವ ಜಾಗದಲ್ಲಿ ಸೊಳ್ಳೆಗಳ ಉತ್ಪತಿಯಾಗ್ತಿದ್ದು, ಕಾರಂಜಿಯನ್ನ ಸರಿಯಾಗಿ ನಿರ್ವಹಿಸದ ಪಾಲಿಕೆ ಹಾಗೂ ಸರ್ಕಾರಕ್ಕೆ ಜನರು ಹಿಡಿಶಾಪ ಹಾಕ್ತಿದ್ದಾರೆ.