ಪತ್ರಕರ್ತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಕ್ಷಮೆ ಯಾಚಿಸಿದ್ದಾರೆ. ಮಾಲೂರು ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಆರೋಪಿ ವರ್ತೂರ್ ಸಂತೋಷ್ ಕ್ಷಮೆಯಾಚಿಸಿದ್ದು, ನ್ಯಾಯಾಧೀಶರು ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದ್ದಾರೆ.
ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿತಾಲೂಕಿನ ತೊರ್ನಹಳ್ಳಿ ಗ್ರಾಮದ ಶ್ರೀ ಸಫಲಾಂಬದೇವಿ ಜಾತ್ರಾ ಮಹೋತ್ಸವದ ವೇಳೆ ಜಿಲ್ಲಾಧಿಕಾರಿಗಳ ಆದೇಶವನ್ನು ಕಡೆಗಣಿಸಿ ರಾಸುಗಳ ಜಾತ್ರೆ ನಡೆದಿರುವ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ವರದಿ ಮಾಡಿದ ಪತ್ರಕರ್ತನನ್ನು ರೈತ ವರ್ತೂರ್ ಸಂತೋಷ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು.
ಈ ಬಗ್ಗೆ ಪತ್ರಕರ್ತ ಪೊಲೀಸ್ ಠಾಣೆ ಹಾಗೂ ಜೆಎಂಎಫ್ಸಿ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ಗುರುವಾರ ವರ್ತೂರ್ ಸಂತೋಷ್ ಪಟ್ಟಣದ ನ್ಯಾಯಾಲಯಕ್ಕೆ ಹಾಜರಾಗಿ ಸುದೀರ್ಘ ವಿಚಾರಣೆ ಎದುರಿಸಿದರು. ನ್ಯಾಯಾಧೀಶರ ಮುಂದೆ ಪತ್ರಕರ್ತ ಡಿ.ಎಂ.ವಿಜಯ್ಕುಮಾರ್ ಹಾಗೂ ವರ್ತೂರು ಸಂತೋಷ್ ಅವರ ನಡುವೆ ಘಟನೆಯ ಬಗ್ಗೆ ವಾದ ವಿವಾದಗಳು ನಡೆಯಿತು. ಕೊನೆಗೆ ವರ್ತೂರು ಸಂತೋಷ್ ನ್ಯಾಯಾಧೀಶರ ಮುಂದೆ ಘಟನೆಯ ಬಗ್ಗೆ ಮಾತನಾಡಿದ್ದು ತಪ್ಪಾಗಿದ್ದು, ದಯವಿಟ್ಟು ಕ್ಷಮಿಸುವಂತೆ ಮನವಿ ಮಾಡಿದರು.
ಪೊಲೀಸರು ಐಪಿಸಿ ಸೆಕ್ಸನ್ 436, 445 ಹಾಗೂ 504, 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದಲ್ಲಿಆರೋಪಿ ವರ್ತೂರು ಸಂತೋಷ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡಿದ್ದರೂ ವರ್ತೂರ್ ಸಂತೋಷ್ಗೆ ನ್ಯಾಯಾಲಯಕ್ಕೆ ಹಾಜರಾರಲಿಲ್ಲ. ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಪಡೆದು ವಿಚಾರಣೆ ಎದುರಿಸಿದ್ದರು. ವರ್ತೂರ್ ಸಂತೋಷ್ ತಮ್ಮ ವಕೀಲರೊಂದಿಗೆ ಆಗಮಿಸಿ ನ್ಯಾಯಾಲಯದ ಕಾರ್ಯಕಲಾಪದಲ್ಲಿ ಭಾಗವಹಿಸಿ ವಿಚಾರಣೆ ಎದುರಿಸಿದರು. ನ್ಯಾಯಾಲಯಕ್ಕೆ ಸರಿಯಾಗಿ ಹಾಜರಾಗದ ಕಾರಣ ನ್ಯಾಯಾಧೀಶರು ವರ್ತೂರ್ ಸಂತೋಷ್ಗೆ 200 ರೂ. ದಂಡವನ್ನು ವಿಧಿಸಿದರು.