ಮೈಸೂರು: ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟವರಿಂದಲೇ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ ಬಯಲಾಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಯಾಕೆ ಮತ್ತು ಹೇಗೆ? ಇದರ ಹಿಂದೆ ಸಿಎಂ ಕುರ್ಚಿ ಮೇಲೆ ಟವಲ್ ಹಾಕಿರುವವರ ಪಾತ್ರವಿದೆ. ಸೀಡಿ ಫ್ಯಾಕ್ಟರಿ ಬಂದ್ ಆಯಿತು. ಈಗ ಮುಡಾ ಫ್ಯಾಕ್ಟರಿ ಶುರುವಾಗಿದೆ ಎಂದು ಯಾರ ಹೆಸರನ್ನೂ ಹೇಳದೇ ಕೇಂದ್ರ ಸಚಿವರು ಟೀಕಾ ಪ್ರಹಾರ ನಡೆಸಿದರು. ಹಗರಣ ಆಚೆ ಬರಲು ಕಾಂಗ್ರೆಸ್ನವರೇ ಒಳಗೊಳಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಇದೆ.
ಸಿಎಂ ಪತ್ನಿಗೆ ಆ ಜಾಗ ಹೇಗೆ ಬಂತು ಅಂತಲೂ ನನಗೆ ಗೊತ್ತಿದೆ. 62 ಕೋಟಿ ರೂ. ಪರಿಹಾರ ಕೇಳುವ ಸಿಎಂ ಅವರು ಭೂಮಿ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ರೈತರಿಗೂ ಪರಿಹಾರ ಕೊಡಿಸಲಿ ಎಂದು ಒತ್ತಾಯ ಮಾಡಿದರು.
62 ಕೋಟಿ ಪರಿಹಾರವನ್ನು ಸರಕಾರ ಕೊಡಬೇಕು ಎನ್ನುತ್ತಿದ್ದಾರೆ ಸಿಎಂ. ಹೀಗೆ ಹೇಳುವ ಸಿದ್ದರಾಮಯ್ಯ ಅವರಿಗೆ ಜನರ ಕಷ್ಟ ಗೊತ್ತಿಲ್ಲವೇ? ರಾಜ್ಯದ ಬಡವರ ನೋವು ಗೊತ್ತಾಗುತ್ತಿಲ್ಲವೇ? ರಾತ್ರೋರಾತ್ರಿ ಭೂಸ್ವಾಧೀನ ಮಾಡಿಕೊಳ್ಳುತ್ತಾರೆ. ಅವರನ್ನು ಬೀದಿಗೆ ನಿಲ್ಲಿಸುತ್ತಾರೆ. ಪರಿಹಾರ ಮಾತ್ರ ಕೊಡುವುದಿಲ್ಲ. ನೀವು ಮಾತ್ರ ದೊಡ್ಡ ಮೊತ್ತದ ಪರಿಹಾರ ಕೇಳುತ್ತಿದ್ದೀರಿ. ಇದು ಯಾವ ನ್ಯಾಯ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.