ಬೆಂಗಳೂರು : ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಹಲಗಲಿ ಚಿತ್ರಕ್ಕೆ ಡಾಲಿ ಧನಂಜಯ್ ನಾಯಕನಾಗಿ ಎಂಟ್ರಿ ಆಗಿದ್ದಾರೆ. ಆ ಮೂಲಕ ಡಾಲಿ ಮತ್ತೊಂದು ಐತಿಹಾಸಿಕ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಸುಕೇಶ್ ಡಿ ಕೆ ನಿರ್ದೇಶನದ ಈ ಚಿತ್ರವು 80 ಕೋಟಿ ವೆಚ್ಚದಲ್ಲಿ ಎರಡು ಭಾಗಗಳಲ್ಲಿ ಮೂಡಿ ಬರುತ್ತಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬರಲಿರುವ ಈ ಚಿತ್ರಕ್ಕೆ ಮೈಸೂರಿನ ಲಲಿತ್ ಮಹಲ್ ನಲ್ಲಿ ಪೂಜೆ ಮಾಡುವ ಮೂಲಕ ಅದ್ಧೂರಿ ಚಾಲನೆ ನೀಡಲಾಗಿದೆ.
ಕನ್ನಡ ನಾಡಿನ ಸ್ವಾತಂತ್ರ್ಯ ಪೂರ್ವದ ವೀರರ ಕಥೆಯನ್ನು ಒಳಗೊಂಡ ಈ ಚಿತ್ರದಲ್ಲಿ ಡಾಲಿ ಧನಂಜಯ್ ಅವರು ವಾರಿಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ಯುದ್ಧ ಮಾಡಿದ ಕನ್ನಡ ನೆಲದ ಹಲಗಲಿಯ ಊರಿನ ಬೇಡರ ಕುರಿತ ಸಿನಿಮಾ ಇದಾಗಿದೆ. ಈ ವೀರರ ಆಚಾರ- ವಿಚಾರ ಹಾಗೂ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ಹಗಲಗಲಿ ಚಿತ್ರದ ಮೂಲಕ ತೆರೆ ಮೇಲೆ ತರಲಾಗುತ್ತಿದೆ.
ಇಂಥದ್ದೊಂದು ಬಹು ದೊಡ್ಡ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿರುವುದು ಯುವ ಉದ್ಯಮಿ ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ. ತಮ್ಮ ದುಹರ ಮೂವೀಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಇವರು ಈಗಾಗಲೇ ತೆಲಗಿನಲ್ಲಿ ರಚಯತ ಚಿತ್ರವನ್ನು ನಿರ್ಮಿಸಿ, 20ಕ್ಕೂ ಹೆಚ್ಚು ಚಿತ್ರಗಳನ್ನು ಕನ್ನಡ ಹಾಗೂ ತೆಲುಗಿನಲ್ಲಿ ವಿತರಣೆ ಮಾಡಿದ್ದಾರೆ.