ಮುಂಬೈ: 2024ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ (Team India) ಬಿಸಿಸಿಐ 125 ಕೋಟಿ ರೂ. ನಗದು ಬಹುಮಾನ ನೀಡಿದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರವೂ (Maharashtra Government) ಭರ್ಜರಿ ಉಡುಗೊರೆ ಘೋಷಿಸಿದೆ.
ಶುಕ್ರವಾರ ಇಲ್ಲಿನ ವಿಧಾನ ಭವನದ ಸೆಂಟ್ರಲ್ ಹಾಲ್ನಲ್ಲಿ (ರಾಜ್ಯ ಶಾಸಕಾಂಗ ಸಂಕೀರ್ಣ) ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ (Eknath Shinde), ಸರ್ಕಾರದ ವತಿಯಿಂದ 11 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ.
ಇದಕ್ಕೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತಿತರರ ಆಟಗಾರರನ್ನು ಏಕನಾಥ್ ಶಿಂಧೆ ಸನ್ಮಾನಿಸಿದರು. ದಕ್ಷಿಣ ಮುಂಬೈನಲ್ಲಿರುವ ತಮ್ಮ ಅಧಿಕೃತ ನಿವಾಸ ವರ್ಷಾ ಬಂಗಲೆಯಲ್ಲಿ ರೋಹಿತ್ ಶರ್ಮಾ (Rohit Sharma) ಸೇರಿದಂತೆ ಸಹ ಆಟಗಾರರಾದ ಯಶಸ್ವಿ ಜೈಸ್ವಾಲ್, ಶಿವಂ ದುಬೆ ಮತ್ತು ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನ ಸನ್ಮಾನಿಸಿದರು. ಜೊತೆಗೆ ವಿಘ್ನೇಶ್ವರ ಮೂರ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಶಿಂಧೆ, ಅದ್ಭುತ ಮ್ಯಾಚ್, ಡಿಫೈನಿಂಗ್ ಕ್ಯಾಚ್ಗಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಶ್ಲಾಘಿಸಿದರು.
ನಂತರ ಮುಂಬೈನ ಮಹಾರಾಷ್ಟ್ರ ವಿಧಾನ ಭವನದ ಸಂಕೀರ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಲ್ವರು ಆಟಗಾರರನ್ನು ಸನ್ಮಾನಿಸಲಾಯಿತು. ಈ ವೇಳೆ ಶಿಂಧೆ ಅವರು ರೋಹಿತ್ ಶರ್ಮಾಗೆ ಶಿವಾಜಿ ಮಹರಾಜ್ ಮೂರ್ತಿ ನೀಡಿ ಗೌರವಿಸಲಾಯಿತು.
ಈ ಬಾರಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿ ನಡೆಯಿತು. ಆರಂಭದಿಂದಲೂ ಒಂದೇ ಒಂದು ಪಂದ್ಯವನ್ನೂ ಸೋಲದ ಭಾರತ ಫೈನಲ್ನಲ್ಲಿಯೂ ದಕ್ಷಿಣ ಆಫ್ರಿಕಾ ವಿರುದ್ಧ ಬಾರ್ಬಡೋಸ್ನಲ್ಲಿ ರೋಚಕ ಗೆಲುವು ಸಾಧಿಸಿತು.