ಬೆಂಗಳೂರು- ಸಿನಿಮಾ ಒಂದು ಅದೃಷ್ಟದಾಟ..! ಒಮ್ಮೊಮ್ಮೆ ಪ್ರತಿಭೆಯ ಕಾವು ಹತ್ತಿಸಿಕೊಂಡು ಗಾಂಧಿನಗರದ ಬಾಗಿಲು ತಟ್ಟೋರಿಗೆ ಟೈಮ್ ಸಾಥ್ ಕೊಡೋಕೆ ಸತಾಯಿಸುತ್ತೆ. ಆದರೆ ಸಮಯವಾಗಲಿ, ಲಕ್ ಪಕ್ಕಕ್ಕಿಟ್ಟು ಪರಿಶ್ರಮದಿಂದಲೇ ಒಂದಲ್ಲ ಒಂದು ದಿನ ನಟನಾಗ್ತೀನಿ, ಇಲ್ಲೇ ಅನ್ನ ತಿನ್ತೀನಿ ಎಂಬ ಹಠದಲ್ಲೇ ನಟ ಭೀಷ್ಮರಾಮಯ್ಯ ‘ತೂಫಾನ್’ ಎಬ್ಬಿಸೋಕೆ ರೆಡಿಯಾಗಿದ್ದಾರೆ. ಠಾಕೂರ್ ಬಲರಾಮ್ ಸಿಂಘನಾಗಿ ‘ತೂಫಾನ್’ ಮೊದಲನೋಟದಲ್ಲೇ ಸಿನಿರಸಿಕರಿಗೆ ಜೋರ್ ಕಾ ಜಟ್ಕಾ ಕೊಟ್ಟಿದ್ದಾರೆ..! ಏನಪ್ಪಾ ಇದು ಕ್ರೂರತೆ, ಅಬ್ಬರ, ವಿಚಿತ್ರತೆ ಅಂತ ಭೀಷ್ಮರಾಮಯ್ಯ ಲುಕ್ ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ..
ಭೀಷ್ಮರಾಮಯ್ಯ ಚಿತ್ರರಂಗದ ಸರ್ಕಲ್ ಗೆ ಹೊಸಬರಲ್ಲ..! ಒಂದೊಳ್ಳೆ ಸಿನಿಮಾ, ಸವಾಲಿನ ಪಾತ್ರ ಸಿಗೋವರೆಗೂ ಒಬ್ಬ ಒಳ್ಳೆನಟನೂ ಹೊಸಬನಾಗೇ ಇರಬೇಕಾಗುತ್ತೆ. ಭೀಷ್ಮ ಪಾಲಿಗೂ ಜರ್ನಿ ಕಠಿಣವಾಗಿಯೇ ಶುರುವಾಯ್ತು. ರಂಗಭೂಮಿಯ ಮೆಟ್ಟಿಲು ಹತ್ತಿ ನಂತರ ಸಿನಿಮಾಲೋಕಕ್ಕೆ ಹಾಯ್ ಎಂದಿರೋ ಭೀಷ್ಮರಾಮಯ್ಯ, ಈಗಾಗಲೇ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 11 ವರ್ಷದಿಂದ ನಟನಾಗೋ ಕನಸಿನ ಮೂಟೆ ಹೊತ್ತಿದ್ದಾರೆ. ಫುಲ್ ಟೈಮ್ ಸಿನಿಮಾ, ಪಾರ್ಟ್ ಟೈಮ್ ನಾಟಕ ಅಂತ ಭೀಷ್ಮ ತಮ್ಮ ಪೂರ್ಣವಧಿ ಪ್ರೀತಿ ಕೊಟ್ಟಿರೋದು ನಟನೆಗೆ. ಇತ್ತೀಚೆಗೆ ರಿಲೀಸ್ ಆಗಿರೋ ‘ದಿ ಸೂಟ್’ ಚಿತ್ರದಲ್ಲೂ ಭೀಷ್ಮ ನಟಿಸಿದ್ರು. ಈದೀಗ ‘ತೂಫಾನ್’ ಗ್ಲಿಂಪ್ಸ್ ಭೀಷ್ಮ ಎಂಟ್ರಿಗೆ ಮತ್ತಷ್ಟು ಬಲ ತುಂಬಿದೆ. ಭೀಷ್ಮನ ರೌದ್ರವತಾರ ನೋಡಿದ ಆಡಿಯನ್ಸ್ ಕೂಡ ಈ ಕಲಾವಿದ ಬೆಳೆಯಬೇಕು ಅಂತ ಮನದೊಳಗೆ ಹರಿಸಿದ್ದಾರೆ.
ಆನೆಕಲ್ ಮೂಲದ ಭೀಷ್ಮ ಸದ್ಯಕ್ಕಿರೋದು ಬೆಂಗಳೂರಿನ ಹೊಸಕರೆಹಳ್ಳಿಯ ಬಳಿ. ಅಡ್ರೆಸ್ ಮಾತ್ರ ಕೇರ್ ಆಫ್ ಗಾಂಧಿನಗರ್..! ಬರೀ ಖಳನಟ ಅಥವಾ ಕರ್ಮಶಿಯಲ್ ಪೋಷಕಪಾತ್ರಗಳಿಗೆ ಸೀಮಿತವಾಗದೇ ನನ್ನೊಳಗಿನ ನಟನಿಗೆ ಮೇವು ಹಾಕಬೇಕು ಎಂಬ ಓಟದಲ್ಲೇ ಭೀಷ್ಮ ‘ತೂಫಾನ್’ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಳ್ತಿದಾರೆ. ಆಟೋಡ್ರೈವರ್ ಮಗನೊಬ್ಬ ಹೀರೊ ಆಗಬಹುದು ಅಂತ ತೋರಿಸಿಕೊಟ್ಟಿರೋ ತೂಫಾನ್ ನಟ ರೋಷನ್ ಜೊತೆಗೆ ಭೀಷ್ಮ ಕಾಂಬೋ ಬರ್ತಿದೆ. ಕೆಜಿಎಫ್-2, ಅಂಬಿ ನಿಂಗೆ ವಯಸ್ಸಾಯ್ತೋ, ಯುವರತ್ನ, ಶೋಕಿವಾಲ, ರುಸ್ತುಂ, ವೇದ, ಲೀಡರ್, ಸನ್ ಆಫ್ ಬಂಗಾರದ ಮನುಷ್ಯ ಸೇರಿದಂತೆ ಹಲವು ದೊಡ್ಡ ಕ್ಯಾನ್ ವಾಸ್ ಸಿನಿಮಾಗಳಲ್ಲಿ ಭೀಷ್ಮ ಕಾಣಿಸಿಕೊಂಡಿದ್ದಾರೆ. ಕರುನಾಡ ಚಕ್ರವರ್ತಿ ಶಿವಣ್ಣ ಕೈಯಲ್ಲಿ ಪರದೆ ಮೇಲೆ ಒದೆ ತಿಂದಿರೋ ಭೀಷ್ಮ, ಅದನ್ನೇ ಶುಭಫಲ ಅನ್ಕೊತಾರಂತೆ. ಗೆಲುವು ಬಹಳ ದೂರವಿಲ್ಲ. ಬಂದಪಾತ್ರಗಳಿಗೆ ನ್ಯಾಯ ಸಲ್ಲಿಸೋದಷ್ಟೇ ನನ್ ಕಾಯಕ ಅಂತ 3 ಸಿನಿಮಾಗಳಲ್ಲಿ ಭೀಷ್ಮ ಬ್ಯುಸಿಯಾಗಿದ್ದಾರೆ. ಪಕ್ಕದಮನೆ ‘ಟಾಲಿವುಡ್’ನಿಂದ 1 ಸಿನಿಮಾ ಆಫರ್ ಬಂದ್ರೂ, ಸದ್ಯಕ್ಕೆ ಕನ್ನಡದಲ್ಲೇ ನನ್ನ ಗಮನ ಅಂತಾರೆ ಅಚ್ಚಕನ್ನಡದ ಕಲಾವಿದ ಭೀಷ್ಮರಾಮಯ್ಯ..!
-ಮಾವಳ್ಳಿ ಕಾರ್ತಿಕ್. ಫಿಲಂ ಡೆಸ್ಕ್. ಪ್ರಜಾಟಿವಿ