ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಶನಿವಾರ ನಡೆದ ಪ್ರತ್ಯೇಕ ಎನ್ಕೌಂಟರ್ನಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ನಾಲ್ವರು ಭಯೋತ್ಪಾದಕರನ್ನು ಭಾರತೀಯ ಸೇನೆಯು ಹೊಡೆದುರುಳಿಸಿದೆ.
ಜಿಲ್ಲೆಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಭಯೋತ್ಪಾದಕರ ಉಪಟಳದ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ನಡೆಸಿತು.
ಈ ಸಂದರ್ಭದಲ್ಲಿ ಒಂದರ ಹಿಂದೆ ಒಂದು ಎಂಬಂತೆ ಎನ್ಕೌಂಟರ್ಗಳು ನಡೆದವು.
ಮೊಡೆರ್ಗಾಮ್ ಗ್ರಾಮದಲ್ಲಿ ಕನಿಷ್ಠ ಇಬ್ಬರು ಭಯೋತ್ಪಾದಕರು ಇದ್ದಾರೆ ಎಂಬ ಮಾಹಿತಿ ಆಧರಿಸಿ ಮನೆಯ ಮೇಲೆ ಸಿಆರ್ಪಿಎಫ್, ಸೇನೆ ಮತ್ತು ಸ್ಥಳೀಯ ಪೊಲೀಸರ ಜಂಟಿ ಪಡೆಗಳು ದಾಳಿ ನಡೆಸಿತು. ದಾಳಿಯ ಸಮಯದಲ್ಲಿ ಭಯೋತ್ಪಾದಕರ ಗುಂಡಿನ ದಾಳಿ ಪರಿಣಾಮವಾಗಿ ಯೋಧರೊಬ್ಬರು ಹುತಾತ್ಮರಾದರು.
ಕುಲ್ಗಾಮ್ನ ಫ್ರಿಸಾಲ್ ಪ್ರದೇಶದಲ್ಲಿ ನಡೆದ ಮತ್ತೊಂದು ಎನ್ಕೌಂಟರ್ನಲ್ಲಿ ನಾಲ್ವರು ಭಯೋತ್ಪಾದಕರು ಬಲಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಓರ್ವ ಸೇನಾ ಯೋಧ ಹುತಾತ್ಮರಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.