ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ಧ ಸತತ ನಾಲ್ಕನೇ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಗೆದ್ದು ಉತ್ತುಂಗದಲ್ಲಿ ತೇಲುತ್ತಿರುವ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಇದೇ ಎದುರಾಳಿ ವಿರುದ್ದ ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಉಭಯ ತಂಡಗಳ ನಡುವಣ ಮೊದಲನೇ ಏಕದಿನ ಪಂದ್ಯ ಮಾರ್ಚ್ 17 ರಂದು ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪ್ಯಾಟ್ ಕಮಿನ್ಸ್ ಅವರು ಕೌಟುಂಬಿಕ ಕಾರಣಗಳಿಂದಾಗಿ ಭಾರತ ಪ್ರವಾಸವನ್ನು ಅರ್ಧಕ್ಕೆ ಮೊಟುಕುಗೊಳಿಸಿ ತವರಿಗೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದ ಸ್ಟೀವನ್ ಸ್ಮಿತ್, ಇದೀಗ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿಯೂ ನಾಯಕನಾಗಿ ಮುಂದುವರಿಯಲಿದ್ದಾರೆ.
ಅಂದಹಾಗೆ ಸ್ಟೀವನ್ ಸ್ಮಿತ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ಗಳಿಂದ ಗೆಲುವು ಪಡೆಯುವ ಮೂಲಕ ಭಾರತ ತಂಡಕ್ಕೆ ತಿರುಗೇಟು ನೀಡಿತ್ತು. ನಂತರ ಅಹಮದಾಬಾದ್ನಲ್ಲಿ ನಡೆದಿದ್ದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಆದರೆ, ಆರಂಭಿಕ ಎರಡು ಪಂದ್ಯಗಳ ಗೆಲುವಿನ ಆಧಾರದ ಮೇಲೆ ಭಾರತ ತಂಡ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತ್ತು.
ಈ ವರ್ಷಾಂತ್ಯದಲ್ಲಿ ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾರತದ ಕಂಡೀಷನ್ಸ್ಗೆ ಹೊಂದಿಕೊಳ್ಳಲು ಆಸ್ಟ್ರೇಲಿಯಾ ತಂಡಕ್ಕೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ಇದರ ಜೊತೆಗೆ ಭಾರತ ತಂಡಕ್ಕೂ ಕೂಡ ವಿಶ್ವಕಪ್ ನಿಮಿತ್ತ ಈ ಸರಣಿ ತುಂಬಾ ಮಹತ್ವವನ್ನು ಪಡೆದುಕೊಂಡಿದೆ.
ಆಸ್ಟ್ರೇಲಿಯಾ ತಂಡಕ್ಕೆ ಮರಳಿದ ಸ್ಟಾರ್ ಆಟಗಾರರು
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ವೇಳೆ ಗಾಯಕ್ಕೆ ತುತ್ತಾಗಿದ್ದ ಹಿರಿಯ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಏಕದಿನ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವೈಟ್ ಬಾಲ್ ವಿಶೇಷ ಆಟಗಾರರಾದ ಗ್ಲೆನ್ ಮ್ಯಾಕ್ಸ್ವೆಲ್, ಮಿಚೆಲ್ ಮಾರ್ಷ್, ಶಾನ್ ಅಬಾಟ್, ಮಾರ್ಕಸ್ ಸ್ಟೋಯ್ನಿಸ್, ಆಡಂ ಝಾಂಪ, ಜಾಶ್ ಇಂಗ್ಲಿಸ್ ಹಾಗೂ ಅಷ್ಟನ್ ಎಗಾರ್ ಅವರು ಕಳೆದ ವಾರ ಅಹಮದಾಬಾದ್ನಲ್ಲಿ ಏಕದಿನ ಸರಣಿ ನಿಮಿತ್ತ ಅಭ್ಯಾಸ ನಡೆಸಿದ್ದರು. ಮತ್ತೊಂದೆಡೆ ಕೌಟುಂಬಿಕ ಕಾರಣಗಳಿಂದ ರೋಹಿತ್ ಶರ್ಮಾ ಅವರು ಮೊದಲನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹಾಗಾಗಿ ಇವರ ಬದಲು ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ.
ಏಕದಿನ ಸರಣಿಯ ವೇಳಾಪಟ್ಟಿ(ಎಲ್ಲಾ ಪಂದ್ಯಗಳು ಮಧ್ಯಾನ 1:30ಕ್ಕೆ ಆರಂಭ)
ಮೊದಲನೇ ಏಕದಿನ ಪಂದ್ಯ: ಮಾರ್ಚ್ 17, 2023 (ಶುಕ್ರವಾರ), ವಾಂಖೆಡೆ ಸ್ಟೇಡಿಯಂ (ಮುಂಬೈ)
ಎರಡನೇ ಏಕದಿನ ಪಂದ್ಯ: ಮಾರ್ಚ್19, 2023 (ಭಾನುವಾರ), ಆಂಧ್ರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನ (ವಿಶಾಖಪಟ್ಟಣಂ)
ಮೂರನೇ ಏಕದಿನ ಪಂದ್ಯ: ಮಾರ್ಚ್ 22, 2023 (ಬುಧವಾರ), ಎಂ.ಎ ಚಿದಂಬರಂ ಸ್ಟೇಡಿಯಂ, (ಚೆನ್ನೈ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಶ್ರೇಯಸ್ ಅಯ್ಯರ್ ಸ್ಥಾನಕ್ಕೆ ಯಾರು?
ವರದಿಗಳ ಪ್ರಕಾರ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಸಮಸ್ಯೆಯಿಂದ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ದದ ಸರಣಿಗೂ ಅವರು ಅಲಭ್ಯರಾಗಿದ್ದರು. ಶ್ರೇಯಸ್ ಅಯ್ಯರ್ ಅವರ ಸ್ಥಾನವನ್ನು ಮಧ್ಯ ಪ್ರದೇಶ ಬ್ಯಾಟ್ಸ್ಮನ್ ರಜತ್ ಪಾಟಿದಾರ್ ತುಂಬುವ ಸಾಧ್ಯತೆ ಇದೆ.
ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಯುಜ್ವೇಂದ್ರ ಚಹಲ್, ಇಶಾನ್ ಕಿಶನ್, ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕೆ.ಎಲ್ ರಾಹುಲ್, ಶುಭಮನ್ ಗಿಲ್, ಶಾರ್ದುಲ್ ಠಾಕೂರ್, ಉಮ್ರಾನ್ ಮಲಿಕ್, ಜಯದೇವ್ ಉನಾದ್ಕಟ್, ವಾಷಿಂಗ್ಟನ್ ಸುಂದರ್, ಸೂರ್ಯಕುಮಾರ್ ಯಾದವ್
ಆಸ್ಟ್ರೇಲಿಯಾ ಏಕದಿನ ತಂಡ: ಸ್ಟೀವ್ ಸ್ಮಿತ್ (ನಾಯಕ) ಶಾನ್ ಅಬಾಟ್, ಅಷ್ಟನ್ ಎಗರ್, ಅಲೆಕ್ಸ್ ಕೇರಿ, ಕ್ಯಾಮೆರಾನ್ ಗ್ರೀನ್, ಟ್ರಾವಿಸ್ ಹೆಡ್, ಜಾಶ್ ಇಂಗ್ಲಿಸ್, ಮಾರ್ನಸ್ ಲಾಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ಜೇ ರಿಚರ್ಡ್ಸನ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಡೇವಿಡ್ ವಾರ್ನರ್, ಆಡಮ್ ಝಾಂಪ.