ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ ಕೋಟೆ ಭಾಗದ ಆಂಜನೇಯ ಸ್ವಾಮಿ ದೇವಸ್ಥಾನ ಹಿಂಭಾಗದ ಕೆರೆ ಅಂಗಳದಲ್ಲಿ ವಿಜಯನಗರ ಅರಸ ವೀರಪ್ರತಾಪ ರಾಮಚಂದ್ರದೇವನ ಅಪ್ರಕಟಿತ ಶಾಸನವನ್ನು ರಾಜ್ಯ ಪುರಾತತ್ವ ಸಂಗ್ರಹಾಲಯಗಳ ಪರಂಪರೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಪುರಾತತ್ವ ಇಲಾಖೆಯ ಕಮಲಾಪುರ-ಹಂಪಿಯ ಉಪನಿರ್ದೇಶಕ ಡಾ.ಆರ್.ಶೇಜೇಶ್ವರ ಮತ್ತು ಸಹಾಯಕ ಡಾ.ಆರ್.ಮಂಜನಾಯ್ಕ ಅವರು ಪಟ್ಟಣದಲ್ಲಿ ಕ್ಷೇತ್ರಕಾರ್ಯ ನಡೆಸಿದ ಸಂದರ್ಭದಲ್ಲಿ ಶಾಸನ ಪತ್ತೆಯಾಗಿದೆ.
ಕೆರೆ ಅಂಗಳದಲ್ಲಿ ಬಿದ್ದಿರುವ ದೇವಾಲಯದ ಕಂಬದಲ್ಲಿ 24 ಸಾಲಿನ ಕನ್ನಡ ಶಾಸನ ದೊರೆತಿದೆ. ಈ ಶಾಸನವು ಸುಮಾರು ಕ್ರಿ.ಶ.1620ರಲ್ಲಿ ವಿಜಯನಗರದ ಅರಸ ವೀರಪ್ರತಾಪ ರಾಮಚಂದ್ರ ದೇವ ಮಹಾರಾಯರು ಹಂಪಿಯ ವಿಜಯನಗರ ಸಾಮ್ರಾಜ್ಯ ಪ್ರಾಬಲ್ಯ ಕಳೆದುಕೊಂಡ ನಂತರ ಆಂಧ್ರಪ್ರದೇಶದ ಪೆನುಗೊಂಡ,
ನಂತರ ಚಂದ್ರಗಿರಿಯನ್ನು ರಾಜಧಾನಿಯನ್ನಾಗಿಮಾಡಿಕೊಂಡು ಆಳ್ವಿಕೆ ಮಾಡುತ್ತಾರೆ. ಆಗ ಕೊಮರಯ್ಯನು ಹಡಗಲಿಯ ಕೋಟೆಯಿಂದ ಆಳ್ವಿಕೆ ಮಾಡುತ್ತಿದ್ದರು. ಹೂವಿನಹಡಗಲಿಯ ಕುಲಕರಣಿ ಹರಿಯಪ್ಪರ ಮಕ್ಕಳು, ಗಿರಿಯಪ್ಪ ಗೌಡರ ದಾನಪ್ಪ, ಮಲೆಯಪ್ಪಗಳು, ಗೌಡ ಹರಿ ವಿರುಪಣ್ಣ, ನಾಡ ಕಾಳಿಗೌಡ, ತಳವಾರರ ಹೂವಣ್ಣ, ಹಿರೇಹನುಮಗಳು, ಕಮ್ಮಾರ ಜಕ್ಕಣ್ಣ, ಸಿದೋಜಾ, ಬಡಗಿಯರ ಬಾಹೋಜಗಳು,
12 ಆಯಗಾರರು ಮತ್ತು ಸೇನಬೋವ ಮಲೆಯಪ್ಪನು ಸೇರಿ ಹೂವಿನಹಡಗಲಿ ಕೋಟೆಯ ಒಂದು ಭಾಗ, ಸಿಹಿ ನೀರುಕಟ್ಟೆ, ಬಾವಿ, ಊರ ಮುಂದೆ ಚಾವಡಿಯನ್ನು ಕಟ್ಟಿಸುತ್ತಾರೆ. ಈ ಶಾಸನವನ್ನು ಯಾರಾದರೂ ಆಳಿಸಿದರೆ ಅವರ ವಂಶವು ನಾಶವಾಗುವುದು ಎಂದು ಶಾಪವನ್ನು ಕೊಡಲಾಗಿದೆ. ಈ ಶಾಸನವನ್ನು ಸೇನಭೋವ (ಶಾನುಭೋಗ) ಮಲೆಯಪ್ಪನು ಬರೆದಿದ್ದು, ಕಮ್ಮಾರ ಚೆನೂಜನು ಕೆತ್ತಿದ್ದಾನೆ ಎಂದು ಈ ಶಾಸನದಲ್ಲಿ ಉಲ್ಲೇಖವಾಗಿದೆ