ಬೆಂಗಳೂರು : ಟೀಮ್ ಇಂಡಿಯಾ ರಿಷಭ್ ಪಂತ್ ಸೇವೆ ಇಲ್ಲದೆ ಕಷ್ಟ ಪಡುತ್ತಿರುವುದು ನಿಜ. ಇತ್ತೀಚೆಗೆ ಅಂತ್ಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಪಂತ್ ಆಡಿದ್ದರೆ ಫಲಿತಾಂಶ ಇನ್ನೂ ಉತ್ತಮವಾಗಿರುತ್ತಿತ್ತು ಎಂದೇ ಹೇಳಬಹುದು. ಆದರೆ, ಕಳೆದ ವರ್ಷ ಡಿಸೆಂಬರ್ 30ರಂದು ಸಂಭವಿಸಿದ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ರಿಷಭ್ ಪಂತ್ ಬದುಕುಳಿದದ್ದೇ ಪವಾಡ. ಇದೀಗ ನಿಧಾನವಾಗಿ ಚೇತರಿಸುತ್ತಿರುವ ರಿಷಭ್ ಪಂತ್, ಈಜುಕೊಳದಲ್ಲಿ ಹೆಜ್ಜೆ ಹಾಕುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಅಪಘಾತದಲ್ಲಿ ರಿಷಭ್ ಪಂತ್ ಅವರ ಮಂಡಿ ಮೂಳೆ ಮುರಿದಿತ್ತು. ಅದನ್ನು ಸರಿಪಡಿಸಲು ಮುಂಬೈನ ದೊಡ್ಡ ಆಸ್ಪತ್ರೆಯಲ್ಲಿ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಪರಿಣಾಮ ವೃತ್ತಿಪರ ಕ್ರಿಕೆಟ್ನಿಂದ ಒಂದು ವರ್ಷಕ್ಕೂ ಹೆಚ್ಚು ಸಮಯ ಹೊರಗುಳಿಯುವಂತ್ತಾಗಿದೆ. ಪರಿಣತರ ಪ್ರಕಾರ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಕಮ್ಬ್ಯಾಕ್ ಮಾಡಲು ಇನ್ನು ಎರಡು ವರ್ಷವಾದರೂ ಸಮಯವಾದರೂ ಬೇಕು.
ಕೆಲ ದಿನಗಳ ಹಿಂದಷ್ಟೇ ಫೋಟೊ ಹಂಚಿಕೊಂಡಿದ್ದ ರಿಷಭ್ ಪಂತ್, ಇದೀಗ ವಿಡಿಯೋ ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ಪಂತ್ ಸ್ವಿಮಿಂಗ್ ಪೂಲ್ನಲ್ಲಿ ಆಧಾರ ಇಲ್ಲದೆ ನಿಧಾನವಾಗಿ ನಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ನೀರಿನಲ್ಲಿ ಇರುವ ಕಾರಣ ಮಂಡಿ ಮೇಲೆ ಹೆಚ್ಚು ಒತ್ತಡ ಬೀಳುವುದಿಲ್ಲ. ಹೀಗಾಗಿ ನಿಧಾನವಾಗಿ ತಮ್ಮ ಕಾಲಿನ ಚಲನೆಯನ್ನು ಸುಧಾರಿಸಿಕೊಳ್ಳುವ ಪ್ರಯತ್ನ ಪಂತ್ ಅವರದ್ದಾಗಿದೆ.
“ಸಣ್ಣ ಸಣ್ಣ ವಿಚಾರಗಳಿಗೂ ಧನ್ಯತೆ ಮೂಡುತ್ತಿದೆ. ಎಲ್ಲ ದೊಡ್ಡ ಸಂಗತಿಗಳಿಗೂ ಎಲ್ಲ ವಿಚಾರಗಳಿಗೂ ಧನ್ಯತೆಯಿದೆ,” ಎಂದು ಪಂತ್ ತಮ್ಮ ಸೋಷಿಯಲ್ ಮೀಡಿಯಾ ಗೋಡೆ ಮೇಲೆ ಬರೆದುಕೊಂಡು ವಿಡಿಯೋ ಶೇರ್ ಮಾಡಿದ್ದಾರೆ. ಟೀಮ್ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತು ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ, ಈ ಪೋಸ್ಟ್ಗೆ ಉತ್ತರ ಕೂಡ ಬರೆದು ಶುಭ ಹಾರೈಸಿದ್ದಾರೆ.
“ಇದನ್ನೇ ಮುಂದುವರಿಸಿ ಪಂತ್,” ಎಂದು ರವಿ ಶಾಸ್ತ್ರಿ ಕಾಮೆಂಟ್ ಮಾಡಿದ್ದಾರೆ. “ಚಾಂಪಿಯನ್ ನಿನಗೆ ಹೆಚ್ಚು ಶಕ್ತಿ ಸಿಗಲಿ,” ಎಂದು ಸೂರ್ಯಕುಮಾರ್ ಯಾದವ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳು ಕೂಡ ಸಾಲು ಸಾಲಾಗಿ ಶುಭ ಹಾರೈಸಿದ್ದು, ಕಾಮೆಂಟ್ಗಳ ರಾಶಿ ಹರಿದಿದೆ.
“ನನ್ನ ಸುತ್ತಮುತ್ತಲಿನ ಸ್ಥಿತಿಗತಿಗಳು ಧನಾತ್ಮಕವಾಗಿದೆಯೇ ಅಥವಾ ಋಣಾತ್ಮಕವಾಗಿದೆಯೇ ಎಂದು ಹೇಳಲು ಈಗಲೇ ಸಾಧ್ಯವಿಲ್ಲ. ಆದರೆ, ಜೀವನವನ್ನು ಹೇಗೆ ನೋಡಬೇಕು ಎಂಬ ಹೊಸ ದೃಷ್ಟಿಕೋನವನ್ನು ಕಂಡುಕೊಂಡಿದ್ದೇನೆ. ಈಗ ನನ್ನ ಜೀವನದಲ್ಲಿ ಸಣ್ಣ ಸಣ್ಣ ಸಂಗತಿಗಳನ್ನೂ ಆನಂದಿಸುವುದ್ನು ಕಲಿತಿದ್ದೇನೆ. ಇಂದು ವಿಶೇಷತೆ ಸಲುವಾಗಿ ಪ್ರತಿಯೊಬ್ಬರು ಹಗಲು ರಾತ್ರಿ ಕಷ್ಟ ಪಡುತ್ತಿದ್ದಾರೆ. ಆದರೆ, ಸಣ್ಣ ಸಂಗತಿಗಳಲ್ಲಿ ಇರುವ ಆನಂದವನ್ನು ಅನುಭವಿಸುವುದನ್ನು ಮರೆತಿದ್ದೇವೆ,” ಎಂದು ಐಎಎನ್ಎಸ್ ಸುದ್ದಿ ಸಂಸ್ಥೆಗೆ ನೀಡಿದ್ದ ಸಂದರ್ಶನ ಒಂದರಲ್ಲಿ ಪಂತ್ ಹೇಳಿಕೊಂಡಿದ್ದರು.
ಪಂತ್ ಬಹುಬೇಗ ಗುಣಮುಖರಾಗಿ ಭಾರತ ತಂಡದ ಪರ ಮತ್ತೆ ಆಡುವಂತೆ ಆಗಬೇಕೆಂಬುದೇ ಕ್ರಿಕೆಟ್ ಪ್ರಿಯರ ಹಾರೈಕೆ ಹಾಗೂ ಹೆಬ್ಬಯಕೆ ಆಗಿದೆ.