ಹಾಸನ: ನಿಮ್ಮ ಪಾಡಿಗೆ ನೀವು ಇರಿ, ನಮ್ಮ ಪಾಡಿಗೆ ನಾವು ಇರ್ತೀವಿ. ನಿಮ್ಮದು ನಾನು ಹೇಳಲು ಹೋದರೆ ನೀವು ಇನ್ನೊಂದು ಹೇಳುತ್ತೀರಿ ಎಂದು ದಳಪತಿಗಳ ವಿರುದ್ಧ ಶಾಸಕ ಕೆಎಂ ಶಿವಲಿಂಗೇಗೌಡ (Shivalinge Gowda) ಗುಡುಗಿದ್ದಾರೆ.
ಹಾಸನ (Hassana) ಜಿಲ್ಲೆಯ ಅರಸೀಕೆರೆಯಲ್ಲಿ ಮಾತನಾಡಿದ ಅವರು, ಹಲವಾರು ಕಾರ್ಯಕ್ರಮಗಳನ್ನು ಅವರು ಮಾಡಿದ್ದಾರೆ ನಾನೇನು ಇಲ್ಲ ಎನ್ನಲ್ಲ. ರಾಜಕೀಯದಲ್ಲಿ ಸ್ವಂತ ಅಣ್ಣ ತಮ್ಮಂದಿರೇ ಯುದ್ಧಕ್ಕೆ ನಿಂತು ಬೇರೆಯಾಗಿ ಹೋಗುತ್ತಾರೆ. ಹೌದು ನಮಗೂ ಅವರಿಗೂ ಭಿನ್ನಾಭಿಪ್ರಾಯ ಬಂತು. ಅದು ಎಲ್ಲರಿಗೂ ಗೊತ್ತಿದೆ. ಏಕಾಏಕಿ ಒಂದು ಸಭೆಯಲ್ಲಿ ನಾನು ಗಿಜಿಹಳ್ಳಿ ತೋಟದಲ್ಲಿ ಪರಿಹಾರ ಕೊಡಿಸಲು ಮಲಗಿದ್ದೆ, ಇವನು ನಾಟಕಕ್ಕೆ ಮಲಗಿದ್ದ ಎಂದರೆ, ನಾನ್ಯೇಕೆ ಇರಬೇಕು ಇವರೊಂದಿಗೆ ಎಂದು ಕಿಡಿಕಾರಿದರು.
ನಾನಿನ್ನೂ ಪಕ್ಷವನ್ನೇ ಬಿಟ್ಟು ಹೋಗಿಲ್ಲ. ಜಾತ್ರೆಗಳಿವೆ, ಬರಲು ಆಗಲ್ಲ ಎಂದಿದ್ದೆ. ಚಾಕು, ಚೂರಿ ಹಾಕಿ ಹೋದ ಎಂದು ಇವರು ಮಾತನಾಡಿದರೆ ಅವರ ಜೊತೆ ನನಗೇನು ಕೆಲಸ? ಇದರಿಂದಲೇ ಭಿನ್ನಾಭಿಪ್ರಾಯಗಳು ಬಂದಿರುವುದು. ನಾನೇನೂ ಇದನ್ನೆಲ್ಲಾ ಮಾಡಿಕೊಂಡಿಲ್ಲ ಎಂದು ಹೇಳಿದರು.
ರಾಜ್ಯಸಭಾ ಚುನಾವಣೆಯಲ್ಲಿ ಲೆಹರ್ ಸಿಂಗ್ಗೆ ಓಟು ಹಾಕಿದರೆ 5 ಕೋಟಿ ರೂ. ಕೊಡುತ್ತೇನೆ ಎಂದಿದ್ದರು. ನಾನು ಎಂದಿಗೂ ಮಾನ ಮರ್ಯಾದೆ ಮಾರಿಕೊಂಡು ಜೀವನ ಮಾಡಿಲ್ಲ. ಇಂದು ಕರ್ನಾಟಕ ರಾಜ್ಯದಲ್ಲಿ ಶಿವಲಿಂಗೇಗೌಡ ಎಂದರೆ ಒಂದು ಹೆಸರಿದೆ. ಭಿನ್ನಾಭಿಪ್ರಾಯ ಬಂತು, ಬೇರೆ ಆಗಿ ಬಿಟ್ಟಿದ್ದೇವೆ. ನೀವು ಬೇರೆಡೆ ಹೋಗಿ ನಿಮ್ಮ ಪಕ್ಷ ಕಟ್ಟಿಕೊಂಡಿದ್ದೀರಿ. ನನಗೆ ನನ್ನ ಕ್ಷೇತ್ರದ 5-6 ಸಾವಿರ ಜನರು ಸೇರಿ ಕಾಂಗ್ರೆಸ್ಗೆ ಸೇರಬೇಕು ಎಂದು ಸೂಚಿಸಿದರು. ಜನ ಏನು ಹೇಳಿದ್ರು ಅದರಂತೆ ನಾನು ಕಾಂಗ್ರೆಸ್ಗೆ ಹೋಗುವಂತಹ ಕೆಲಸ ಮಾಡಿದ್ದೇನೆ. ಆದರೆ ನೀವು ಈ ರೀತಿ ಮಾಡುವುದು, ಸುಮ್ಮನೆ ಏನೇನೋ ಹೇಳುವುದು ತರವಲ್ಲ ಎಂದು ಕಿಡಿಕಾರಿದರು.
ಏನು? ಯಾಕೆ? ಏನಾಯ್ತು? ಎಂಬುದನ್ನು ನಾನು ಹೇಳುತ್ತೇನೆ. ನಿಮ್ಮ ಪಾಡಿಗೆ ನೀವು ಇರಿ, ನಮ್ಮ ಪಾಡಿಗೆ ನಾನು ಇರುತ್ತೇನೆ. ನಾನೇನೂ ಯಾರಿಗೂ ಮೋಸ ಮಾಡಿಲ್ಲ. ಪಕ್ಷ ದ್ರೋಹ ಮಾಡಿಲ್ಲ. ಯಾರಿಗೂ ಕೆಟ್ಟ ಹೆಸರು ತಂದಿಲ್ಲ. ಹೊಂದಾಣಿಕೆ ಆಗಲಿಲ್ಲ ಅದಕ್ಕೆ ಹೋಗಿದ್ದೇನೆ. ಈ ದೇಶದ ಪ್ರಜಾಪ್ರಭುತ್ವದಲ್ಲಿ ಎಂತೆಂತಹವರು ಪಕ್ಷ ಬಿಟ್ಟು ಹೋಗಿದ್ದಾರೆ. ಎಟಿ ರಾಮಸ್ವಾಮಿ, ಶ್ರೀನಿವಾಸ್ಗೌಡ, ಗುಬ್ಬಿ ವಾಸಣ್ಣ ಯರ್ಯಾರೋ ಯಾವ್ಯಾವುದೋ ಪಕ್ಷ ಬಿಟ್ಟು ಹೋಗಿದ್ದಾರೆ. ಅವತ್ತು 17 ಜನರ ಜೊತೆ ಹೋಗುವುದಾದರೆ ಅವತ್ತೆ ನನಗೆ ಮಂತ್ರಿ ಸ್ಥಾನ ಕೊಡುತ್ತಿದ್ದರು. ನಾನು ಅಂತಹ ಕೆಟ್ಟ ಕೆಲಸ ಮಾಡಲ್ಲ. ನೀವು ಬಿ ಫಾರಂ ಕೊಟ್ಟಿದ್ದು 5 ವರ್ಷ, ಏಪ್ರಿಲ್ 23ರ ವರೆಗೆ ನಿಮ್ಮ ಋಣ ಇದೆ. ಅಲ್ಲಿಯವರೆಗೂ ನಾನು ರಾಜೀನಾಮೆ ಕೊಡಲ್ಲ. ಆಮೇಲೆ ನಾನು ಕೊಟ್ಟು ಹೋಗುತ್ತೇನೆ ಎಂದು ತಿಳಿಸಿದರು.
ನಾನು ರಾಜಕೀಯದ ಸನ್ಯಾಸಿ ಅಲ್ಲ. ನಾನು ರಾಜಕೀಯ ಮಾಡಲೇಬೇಕು, ನಾನು ಮಾಡುತ್ತೇನೆ. ಅದುಕ್ಕೋಸ್ಕರ ಈ ಭಿನ್ನಾಭಿಪ್ರಾಯ ಬೇಡ. ರಣರಂಗದಲ್ಲಿ ನನ್ನನ್ನು ಸೋಲಿಸಿ, ನಾನೇನು ಬೇಡ ಎನ್ನಲ್ಲ. ಈ ಕ್ಷೇತ್ರದ ಜನರು ನನ್ನ ಕೈ ಹಿಡಿದರೆ ನಾನು ಮುಂದುವರಿಯುತ್ತೇನೆ. ಈ ಕ್ಷೇತ್ರದ ಜನರು ಮುಂದುವರಿಯಲು ಬಿಡದೇ ಹೋದರೆ ಮನೆಗೆ ಹಿಂದಿರುಗುತ್ತೇನೆ. ಅದರಲ್ಲಿ ತಪ್ಪು ಏನಿದೆ? ಅದನ್ನು ಬಿಟ್ಟು ಇವನು ಮೋಸ ಮಾಡಿದ ಎಂದರೆ? ನಾನು ಯಾರಿಗೆ ಮೋಸ ಮಾಡಿದ್ದೇನೆ? ಎಂದು ಗುಡುಗಿದರು.