ಮಾಸ್ಕೊದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲವು ಒಳ್ಳೆಯ ಸುದ್ದಿಗಳನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಕಜಾನ್ ಮತ್ತು ಯೆಕಟೆರಿನ್ಬರ್ಗ್ಗಳಲ್ಲಿ ಹೊಸದಾಗಿ ಕಾನ್ಸುಲೇಟ್ ಕಚೇರಿಗಳನ್ನು ಆರಂಭಿಸಲು ನಿರ್ಧರಿಸಿದ್ದೇವೆ. ಇವು ಪ್ರಯಾಣ ಮತ್ತು ವ್ಯಾಪಾರದ ಅಭಿವೃದ್ಧಿ ದೃಷ್ಟಿಯಿಂದ ಅನುಕೂಲಕರವಾಗಲಿವೆ ಎಂದರು.
2 ವರ್ಷಗಳ ಹಿಂದೆ ಭಾರತ-ರಷ್ಯಾದ ‘ನಾರ್ತ್-ಸೌತ್ ಕಾರಿಡಾರ್’ಮೂಲಕ ಮೊದಲ ಸರಕು ಸಾಗಣೆ ಮಾಡಲಾಗಿದೆ. ಅದೊಂದು ಗಮನಾರ್ಹ ಸಾಧನೆಯಾಗಿತ್ತು. ಈಗ ಭಾರತ ಮತ್ತು ರಷ್ಯಾ ದೇಶಗಳು ಚೆನ್ನೈ-ವಾಲ್ಡಿವೋಸ್ಟಾಕ್ ಪೂರ್ವ ಕಾರಿಡಾರ್ ತೆರೆಯಲು ಮುಂದಾಗಿವೆ ಎಂದು ತಿಳಿಸಿದರು.
2015ರಲ್ಲಿ ನಾನು ರಷ್ಯಾಗೆ ಮೊದಲ ಬಾರಿಗೆ ಭೇಟಿ ನೀಡಿದಾಗ 21ನೇ ಶತಮಾನವು ಭಾರತಕ್ಕೆ ಸೇರಿದ್ದಾಗಿರುತ್ತದೆ ಎಂದು ಹೇಳಿದ್ದೆ. ಇಂದು ವಿಶ್ವ ಬಂಧುವಾಗಿ ಭಾರತವು ಜಗತ್ತಿಗೆ ಹೊಸ ವಿಶ್ವಾಸ ನೀಡುತ್ತಿದೆ. ಭಾರತದ ಬೆಳೆಯುತ್ತಿರುವ ಸಾಮರ್ಥ್ಯವು ಇಡೀ ವಿಶ್ವಕ್ಕೆ ಸ್ಥಿರತೆ ಮತ್ತು ಸಮೃದ್ಧಿಯ ಭರವಸೆ ನೀಡಿದೆ. ಭಾರತವು ವಿಶ್ವದ ಬಹುವಿಧದ ಬೆಳವಣಿಗೆಯ ಆಧಾರಸ್ತಂಭವಾಗಿದೆ. ಭಾರತವು ಶಾಂತಿ ಮತ್ತು ರಾಜತಾಂತ್ರಿಕತೆಯ ಮಾತುಗಳನ್ನಾಡಿದಾಗ ಇಡೀ ವಿಶ್ವ ಕೇಳಿಸಿಕೊಳ್ಳುತ್ತದೆ ಎಂದರು. ಇದೇ ವೇಳೆ ನೆರೆದಿದ್ದ ಭಾರತೀಯರು ತ್ರಿವರ್ಣ ಧ್ವಜವನ್ನು ಹಿಡಿದು ಮೋದಿಯನ್ನು ಅಭಿನಂದಿಸಿದರು.