ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಇಬ್ಬರು ಮಹತ್ವದ ಸಭೆಯಲ್ಲಿ ಭಾಗಿಯಾಗಿದ್ದು ಹಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಮೋದಿ ಹಾಗೂ ಪುಟೀನ್ ಸಮ್ಮುಖದಲ್ಲಿ ಭಾರತ ಮತ್ತು ರಷ್ಯಾದ 9 ಮಹತ್ವದ ಒಪ್ಪಂದಗಳಿಗೆ ಕಾನೂನಾತ್ಮಕ ಅನುಮೋದನೆ ಸಿಕ್ಕಿದೆ.
ಈ ಮಹತ್ವದ ಒಪ್ಪಂದವು ಮುಕ್ತ ವ್ಯಾಪಾರದಿಂದ ಹಿಡಿದು ರೂಪಾಯಿಯಲ್ಲಿ ವ್ಯಾಪಾರ ಮಾಡುವವರೆಗೆ ಎಲ್ಲವನ್ನೂ ಒಳಗೊಂಡಿದ್ದು, ಭಾರತೀಯ ವಿದೇಶಾಂಗ ಸಚಿವಾಲಯ ನೀಡಿರುವ ಮಾಹಿತಿಯಲ್ಲಿ ಆರ್ಥಿಕ ಅಜೆಂಡಾವೇ ಪ್ರಧಾನವಾಗಿದೆ ಎಂದು ಹೇಳಲಾಗಿದೆ. ರಕ್ಷಣೆ ಮತ್ತು ಭದ್ರತೆ ಕೂಡ ಚರ್ಚೆಯ ಪ್ರಮುಖ ಅಂಶವಾಗಿತ್ತು. ಸಂಪರ್ಕ ಕಾರಿಡಾರ್ ಬಗ್ಗೆಯೂ ಚರ್ಚಿಸಲಾಗಿದೆ. ಚೆನ್ನೈ-ವ್ಲಾಡಿವೋಸ್ಟ್ಸ್ಕ್ ಕಾರಿಡಾರ್ ಬಗ್ಗೆಯೂ ಉಭಯ ನಾಯಕರ ನಡುವೆ ಚರ್ಚೆ ನಡೆದಿದೆ.
ಮಾಸ್ಕೋದಲ್ಲಿ ರಷ್ಯಾ ಮತ್ತು ಭಾರತ ನಡುವಿನ 22 ನೇ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯ ನಂತರ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ, ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮಾತನಾಡಿ, ಇಂಧನ ಮತ್ತು ರಸಗೊಬ್ಬರಗಳ ಪೂರೈಕೆಯ ಬಗ್ಗೆ ಮಾತುಕತೆಯ ವೇಳೆ ಪ್ರಧಾನಿ ಗಮನಹರಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಪುಟಿನ್ ನಡುವಿನ ಶೃಂಗಸಭೆ 2 ಗಂಟೆಗಳ ಕಾಲ ನಡೆಯಿತು. ಇದರಲ್ಲಿ ಇಬ್ಬರೂ ನಾಯಕರು 2030ರ ವೇಳೆಗೆ 100 ಬಿಲಿಯನ್ ಡಾಲರ್ ವ್ಯವಹಾರದ ಗುರಿಯನ್ನು ಹೊಂದಿದ್ದಾರೆ ಎಂದು ಹೇಳಿದರು.
ಇದೇ ವೇಳೆ ರಷ್ಯಾ ಸೇನೆಯಲ್ಲಿ ಭಾರತೀಯರ ನೇಮಕಾತಿ ಕುರಿತು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವ ಭರವಸೆಯನ್ನು ರಷ್ಯಾ ನೀಡಿತ್ತು. ನಂತರ ಈ ವಿಷಯದ ಬಗ್ಗೆ ರಷ್ಯಾದ ರಾಯಭಾರಿ ಮಾತನಾಡಿ, ಇದು ಭಾರತದ ಪಾಲಿಗೆ ಕಳವಳಕಾರಿ ವಿಷಯ ಎಂದು ನಮಗೆ ತಿಳಿದಿದೆ. ಈ ನಿರ್ದಿಷ್ಟ ವಿಷಯದ ಕುರಿತು ನಾವು ಸಂವಾದ ನಡೆಸಲು ಮುಕ್ತರಾಗಿದ್ದೇವೆ. ನಾವು ಭಾರತೀಯ ಕಾಳಜಿಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ ಮತ್ತು ಯುದ್ಧಭೂಮಿಯಲ್ಲಿ ಭಾರತೀಯರು ಸಾಯುವುದನ್ನು ನೋಡಲು ನಾವು ಬಯಸುವುದಿಲ್ಲ. ನಾವು ಯಾವತ್ತೂ ಭಾರತೀಯರನ್ನು ರಷ್ಯಾದ ಸೈನ್ಯಕ್ಕೆ ಸೇರಿಸಿಕೊಂಡಿಲ್ಲ ಈ ನಿರ್ದಿಷ್ಟ ಸಮಸ್ಯೆಯು ಆ ಏಜೆನ್ಸಿಗಳು, ಮಧ್ಯವರ್ತಿಗಳು ಮತ್ತು ಭಾರತೀಯ ನಾಗರಿಕರನ್ನು ಮೊದಲ ಸ್ಥಾನದಲ್ಲಿ ತಪ್ಪುದಾರಿಗೆಳೆಯುವ ವ್ಯಕ್ತಿಗಳಿಗೆ ಸಂಬಂಧಿಸಿದೆ. ರಷ್ಯಾದ ಸೇನೆಯಲ್ಲಿರುವ ಭಾರತೀಯರ ಸಂಖ್ಯೆಯ ಬಗ್ಗೆ ನಿಖರವಾದ ಮಾಹಿತಿ ಇಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ. ಆದರೆ ಹೊರಬಿದ್ದಿರುವ ಅಂಕಿ ಅಂಶಗಳಿಂದ 30ರಿಂದ 35 ಮಂದಿ ಇದ್ದಂತೆ ತೋರುತ್ತಿದ್ದು, ಈ ಪೈಕಿ 10 ಮಂದಿ ಭಾರತಕ್ಕೆ ಮರಳಿದ್ದಾರೆ ಎಂದು ಹೇಳಿದ್ದಾರೆ.
ರಷ್ಯಾ-ಭಾರತ ನಡುವಿನ 22 ನೇ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯ ನಂತರ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ, ವಿಶೇಷ ಮತ್ತು ಪ್ರಮುಖ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೆಚ್ಚಿಸಲು ಎರಡೂ ಕಡೆಯವರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ರಷ್ಯಾ-ಭಾರತ ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ಉತ್ತೇಜಿಸುವ ಮೂಲಕ ದ್ವಿಪಕ್ಷೀಯ ಮಾತುಕತೆಗೆ ಹೆಚ್ಚುವರಿ ಪ್ರಾಮುಖ್ಯತೆಯನ್ನು ನೀಡುವ ಬಗ್ಗೆ ಎರಡೂ ದೇಶದ ನಾಯಕರು ಪ್ರಸ್ತಾಪಿಸಿದ್ದಾರೆ.