ಸ್ಯಾಂಡಲ್ ವುಡ್ ನ ಖ್ಯಾತ ನಟಿ ಸುಧಾರಾಣಿ ಇಂದಿಗೂ ಸಾಕಷ್ಟು ಬೇಡಿಕೆ ಗಳಿಸಿಕೊಂಡಿದ್ದಾರೆ. ಹಿರಿತೆರೆ ಜೊತೆಗೆ ಕಿರುತೆರೆಯಲ್ಲೂ ನಟಿ ಫುಲ್ ಬ್ಯುಸಿಯಾಗಿದ್ದಾರೆ. ನಾಯಕಿಯಾಗಿ ಸಾಕಷ್ಟು ಬೇಡಿಕೆ ಇರುವಾಗಲೇ ಮದುವೆಯಾದ ಸುಧಾರಾಣಿ ಅಮೆರಿಕಾಗೆ ತೆರಳಿದ್ದರು. ಆದರೆ ಪತಿಯ ಕಿರುಕುಳವನ್ನು ತಡೆಯಲಾರದೆ ವಿಚ್ಛೇದನ ಪಡೆದು ವಾಪಸ್ ಭಾರತಕ್ಕೆ ಆಗಮಿಸಿದ್ದರು. ಆ ಬಗ್ಗೆ ನಟಿ ಮಾತನಾಡಿದ್ದಾರೆ.
ಖಾಸಗಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುಧಾರಾಣಿ, ‘ನಾನು ಮದುವೆ ಆಗಿ ಅಮೆರಿಕಕ್ಕೆ ಹೋದಾಗ ಕಷ್ಟ ಆಯ್ತು. ಅಮೆರಿಕಕ್ಕೆ ಹೋದಾಗ ಅಲ್ಲಿ ಎಲ್ಲವನ್ನು ನಾವೇ ಮಾಡಿಕೊಳ್ಳಬೇಕಿತ್ತು. ಕಲಿಯಲಿಲ್ಲ ಅಂದರೆ ಬದುಕೋಕೆ ಸಾಧ್ಯವಿಲ್ಲ. ನನ್ನಲ್ಲಿ ಇನ್ನೋರ್ವ ವ್ಯಕ್ತಿ ಇದ್ದಾನೆ ಅನ್ನೋದು ಆಗ ಗೊತ್ತಾಯಿತು. ನನಗೆ ಹೊಸ ಸುಧಾರಾಣಿ ಕಾಣಿಸಿದರು’ ಎಂದಿದ್ದಾರೆ.
‘ನಾನು ನನ್ನ ಕರಿಯರ್ನಲ್ಲಿ ಮಾಡಿದ ಪಾತ್ರಗಳು ಸಹಾಯ ಮಾಡ್ತು. ನನಗೆ ಅವು ಶಕ್ತಿ ನೀಡಿದವು. ನನ್ನ ಕೈಲಾದ ಪ್ರಯತ್ನ ಮಾಡಿದೆ. ಆಗಲ್ಲ ಎನ್ನುವ ಹಂತಕ್ಕೆ ಹೋದಾಗ ನಾನು ಬಿಟ್ಟೆ. ಆ ವ್ಯಕ್ತಿಗೆ ಮಾನಸಿಕ ಸಮಸ್ಯೆಗಳು ಇದ್ದವು. ಟ್ರೀಟ್ಮೆಂಟ್ ನೀಡಬೇಕು ಎಂದಾಗ ಯಾರೂ ರೆಡಿ ಇರಲಿಲ್ಲ. ಸರಿಹೋಗಬಹುದು ಎಂದು ಕಾದೆ. ಆದರೆ, ಸರಿಹೋಗಲ್ಲ ಎಂದು ಗೊತ್ತಾದಾಗ ನಾನು ಬಂದೆ’ ಎಂದು ಹೇಳಿದ್ದಾರೆ.
‘ಆಗ ನನಗೆ 22 ವರ್ಷ. ಶಿಕ್ಷಣ ಕೂಡ ಪೂರ್ಣಗೊಂಡಿರಲಿಲ್ಲ. ಭಾರತಕ್ಕೆ ಮರಳಿದರೆ ಏನು ಕಥೆ ಎನ್ನುವ ಭಯ ಇತ್ತು. ನಾನು ನನ್ನ ಭಯವನ್ನು ಎದುರಿಸಬೇಕಿತ್ತು. ಕರಿಯರ್ ಇಲ್ಲ ಎಂದರೆ ಅದನ್ನು ಮಾಡಿಕೋ. ಸಮಾಜ ಮಾತನಾಡುತ್ತದೆ. ಒಳಗೆ ನಡೆದಿದ್ದು ಅವರಿಗೆ ಗೊತ್ತಿರುವುದಿಲ್ಲ. ಸಿನಿಮಾ ಕೆಲವರಿಗೆ ಇಷ್ಟ ಆಗುತ್ತದೆ, ಕೆಲವರಿಗೆ ಇಷ್ಟ ಆಗುವುದಿಲ್ಲ. ಅದೇ ರೀತಿ ಕಮೆಂಟ್ಗಳನ್ನು ತೆಗೆದುಕೊಂಡೆ ಎಂದು ಸುಧಾರಾಣಿ ಹಳೆಯ ದಿನಗಳ ಕುರಿತು ಮಾತನಾಡಿದ್ದಾರೆ.