ಪಂಚಮಸಾಲಿ 2ಎ ಮೀಸಲಾತಿಗೋಸ್ಕರ ರಾಜೀನಾಮೆ ನೀಡಲು ಶತಸಿದ್ಧ ಎಂದು ಶಾಸಕ ರಾಜು ಕಾಗೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ಪಂಚಮಸಾಲಿ ಸಮಾಜದ ಮೀಸಲಾತಿ ಕುರಿತು ಸಭೆಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನಿಡಬೇಕು ಎಂಬ ನಿಟ್ಟಿನಲ್ಲಿ ದಶಕಗಳಿಂದ ಹೋರಾಟ ನಡೆದಿದೆ.
ಕಳೆದ ಐದು ವರ್ಷಗಳಿಂದ ಹೋರಾಟ ತೀವ್ರ ಗತಿಯಲ್ಲಿ ಸಾಗಿದೆ. ಆದರೆ, ಸಮಾಜದ ಶಾಸಕರು ಒಗ್ಗಟ್ಟಿನ ಬಲ ಇಲ್ಲದೇ ಇರೋದರಿಂದ ಮೀಸಲಾತಿಗೆ ವಿಳಂಬವಾಗುತ್ತಿದೆ ಎಂದರು.
ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮಿಜಿ ಅವರು ಹಿಂದೆಯೂ ಕೂಡ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಕೆಲವು ನಮ್ಮ ಸಮಾಜದ ಶಾಸಕರು ಸಚಿವ ಸ್ಥಾನಕ್ಕಾಗಿ ಸರ್ಕಾರದ ಮೇಲೆ ಅಷ್ಟೊಂದು ಒತ್ತಡ ಹೇರಿಕೆ ಮಾಡ್ಲಿಲ್ಲ. ನಾನು ಯಾವುದೇ ಸಚಿವ ಸ್ಥಾನಕ್ಕೆ ಆಸೆ ಇಲ್ಲ. ಮೀಸಲಾತಿ ವಿಚಾರದಲ್ಲಿ ಎಲ್ಲರೂ ಶಾಸಕರು ಒಗ್ಗಟ್ಟಾಗಬೇಕು. ಒಟ್ಟಾಗಿ ರಾಜೀನಾಮೆ ಕೊಟ್ರೆ ಯಾವುದೇ ಸರ್ಕಾರವಿರಲಿ ಮೀಸಲಾತಿ ನೀಡುತ್ತದೆ ಎಂದು ಹೇಳಿದರು.
ಹಿಂದೆ ನಮ್ಮ ಹಿರಿಯರು ಸಮಾಜಕ್ಕೋಸ್ಕರ ದೇಶಕ್ಕೋಸ್ಕರ ತ್ಯಾಗ ಮಾಡಿದ್ದರಿಂದ ಅವರು ಇತಿಹಾಸ ಪುಟ ಸೇರಿಕೊಂಡಿದ್ದಾರೆ. ನಾವು ಕೂಡ ಇಲ್ಲಿ ಪಂಚಮಸಾಲಿ ಸಮಾಜಕ್ಕೋಸ್ಕರ ಏನಾದರು ಒಂದು ನಿರ್ಣಯ ಮಾಡಬೇಕು. ನಾನು ರಾಜೀನಾಮೆಗೆ ಸಿದ್ಧನಿದ್ದೇನೆ. ಪಂಚಮಸಾಲಿ ಸಮಾಜದ ಸಲುವಾಗಿ ರಾಜು ಕಾಗೆ ರಾಜೀನಾಮೆ ನೀಡಿದ್ದ ಎಂದು ಇತಿಹಾಸ ಪುಟದಲ್ಲಿ ಸೇರಿ ಹೋಗಲಿ ಎಂದು ತಿಳಿಸಿದರು