ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ 125 ಕೋಟಿ ರೂ. ಬಹುಮಾನ ಮೊತ್ತ ನೀಡಿದೆ. ಕೋಚ್ ರಾಹುಲ್ ದ್ರಾವಿಡ್ ಅವರಿಗೆ ತಲಾ 5 ಕೋಟಿ ರೂ. ನೀಡಲಾಗಿದೆ ಆದರೆ ಅವರು ನನಗೆ ಬೇಡವೆಂದು ನಿರಾಕರಿಸಿದ್ದಾರೆ. ಇತರೆ ಸಿಬ್ಬಂದಿಗಳಂತೆ ತಾನು ಸಹ 2.5 ಕೋಟಿ ರೂ. ಬಹುಮಾನ ಮೊತ್ತವನ್ನು ತೆಗೆದುಕೊಳ್ಳುತ್ತೇನೆ ಆದರೆ ಹೆಚ್ಚುವರಿಯಾಗಿ ನನಗೆ ಹಣ ಬೇಡವೆಂದು ಬಿಸಿಸಿಐಗೆ ತಿಳಿಸಿದ್ದಾರೆ
ವಿಷಯ ಏನೆಂದರೆ 125 ಕೋಟಿ ರೂಪಾಯಿ ಮೊತ್ತದ ಬಹುಮಾನದಲ್ಲಿ ತಂಡಕ್ಕೆ ಆಯ್ಕೆ ಆಗಿದ್ದ 15 ಆಟಗಾರರಿಗೆ ತಲಾ 5 ಕೋಟಿ ರೂಪಾಯಿ ನೀಡೋದಾಗಿ ಬಿಸಿಸಿಐ ಹೇಳಿತ್ತು. ಅವರ ಜೊತೆ ಮುಖ್ಯ ಕೋಚ್ ದ್ರಾವಿಡ್ಗೂ ಐದು ಕೋಟಿ ಸಿಗಲಿದೆ ಎಂದು ಬಿಸಿಸಿಐ ಹೇಳಿತ್ತು. ಉಳಿದಂತೆ ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಸೇರಿದಂತೆ ಇತರೆ ಕೋಚ್ ಸಿಬ್ಬಂದಿಗೆ ತಲಾ 2.5 ಕೋಟಿ ರೂಪಾಯಿ ನೀಡೋದಾಗಿ ಹೇಳಿತ್ತು. ದ್ರಾವಿಡ್ ಅವರು ತಂಡದಲ್ಲಿದ್ದ ಎಲ್ಲಾ ಕೋಚ್ಗಳಿಗೂ ಹಣ ನೀಡಿದಂತೆ ತಮಗೂ ನೀಡಿ. ಹೆಚ್ಚುವರಿಯಾಗಿ ನನಗೆ ಏನೂ ಬೇಡ. ಅವರಂತೆ ನಾನೂ ಸಮ ಎಂದು ಬಿಸಿಸಿಐ ಬಳಿ ಮನವಿ ಮಾಡಿಕೊಂಡಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಈ ಅಸಮಾನತೆಯನ್ನು ಹೋಗಲಾಡಿಸಲು ಖುದ್ದು ರಾಹುಲ್ ದ್ರಾವಿಡ್ 2.5 ಕೋಟಿ ರೂ. ಕಡಿತಗೊಳಿಸಲು ಮುಂದಾಗಿದ್ದಾರೆ. ಅಲ್ಲದೆ ಇತರೆ ಸಿಬ್ಬಂದಿಗಳಂತೆ ನಾನು ಸಹ 2.5 ಕೋಟಿ ರೂ. ಬಹುಮಾನವನ್ನು ತೆಗೆದುಕೊಳ್ಳುತ್ತೇನೆ ಎಂದು ಬಿಸಿಸಿಐ ಅಧಿಕಾರಿಗೆ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಅಂದಹಾಗೆ ರಾಹುಲ್ ದ್ರಾವಿಡ್ ಸಮಬಾಳು-ಸಮಪಾಲು ಸಿದ್ಧಾಂತವನ್ನು ಪಾಲಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2018 ರಲ್ಲಿ ಭಾರತ ಅಂಡರ್-19 ವಿಶ್ವಕಪ್ ಗೆದ್ದಾಗ ದ್ರಾವಿಡ್ ಮುಖ್ಯ ಕೋಚ್ ಆಗಿದ್ದರು. ಈ ವೇಳೆ ಹೆಡ್ ಮಾಸ್ಟರ್ ದ್ರಾವಿಡ್ಗೆ ಬಿಸಿಸಿಐ 50 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಹೇಳಿತ್ತು. ಜೊತೆಗೆ ಇತರೆ ಕೋಚ್ಗಳಿಗೆ 25 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಹೇಳಿತ್ತು. ಬಿಸಿಸಿಐ ಈ ನಿಲುವನ್ನು ದ್ರಾವಿಡ್ ಅಂದು ಕೂಡ ವಿರೋಧಿಸಿದ್ದರು.