ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ಜೈಲು ಸೇರುತ್ತಿದ್ದಂತೆಯೇ ಅವರ ಸಾಕಷ್ಟು ಅಭಿಮಾನಿಗಳು ಆತಂಕಕ್ಕೆ ಒಳಗಾದರು. ಅಲ್ಲದೆ ಇನ್ನೂ ಕೆಲವರು ಅತಿರೇಕದ ವರ್ತನೆಗಳನ್ನು ತೋರಿದ್ದರು. ಇದೀಗ ದರ್ಶನ್ ಜೈಲಿನಲ್ಲಿದ್ದುಕೊಂಡೇ ಅಭಿಮಾನಿಗಳ ಬಗ್ಗೆ ವಕೀಲರಾದ ನಾರಾಯಣಸ್ವಾಮಿ ಬಳಿ ವಿವಾರಿಸಿದ್ದು ಈ ಬಗ್ಗೆ ವಕೀಲರು ಮಾತನಾಡಿದ್ದಾರೆ.
ನಿನ್ನೆ (ಜುಲೈ 10) ಪರಪ್ಪನ ಅಗ್ರಹಾರದಲ್ಲಿ ವಕೀಲ ನಾರಾಯಣಸ್ವಾಮಿ ಅವರು ದರ್ಶನ್ ಹಾಗೂ ಪವಿತ್ರಾ ಗೌಡ ಅವರನ್ನು ಭೇಟಿ ಆಗಿದ್ದಾರೆ. ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ದರ್ಶನ್ ಮತ್ತು ಪವಿತ್ರಾ ಗೌಡ ಅವರನ್ನು ವಕೀಲರು ಪ್ರತ್ಯೇಕವಾಗಿ ಭೇಟಿ ಮಾಡಿದ್ದಾರೆ. ಜಾಮೀನು ಪ್ರಕ್ರಿಯೆಗಳ ಬಗ್ಗೆ ಮಾತುಕತೆ ಮಾಡಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ, ಮುಂದಿನ ಕಾನೂನು ಹೋರಾಟದ ಸಾಧ್ಯತೆಗಳ ಬಗ್ಗೆಯೂ ಚರ್ಚೆ ಮಾಡಿದ್ದಾರೆ.
ಈ ಮಾತುಕತೆ ಸಲುವಾಗಿ ವಕೀಲರು ದರ್ಶನ್ ಅವರನ್ನು ಭೇಟಿ ಆದಾಗ ಅಭಿಮಾನಿಗಳ ವಿಷಯ ಕೂಡ ಪ್ರಸ್ತಾಪ ಆಗಿದೆ. ಜೈಲಿನಲ್ಲಿ ಇರುವ ದರ್ಶನ್ ಅವರು ಅಭಿಮಾನಿಗಳ ಬಗ್ಗೆ ವಿಚಾರಿಸುವುದನ್ನು ಮರೆತಿಲ್ಲ. ಅಭಿಮಾನಿಗಳು ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ದರ್ಶನ್ ಮನವಿ ಮಾಡಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.