ರೇಣಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಆರೆಸ್ಟ್ ಆಗಿದ್ದು ಇಡೀ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ. ಈ ಬಗ್ಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದು ಮತ್ತಷ್ಟು ಮಂದಿ ಘಟನೆಯ ಕುರಿತು ಮಾತನಾಡಲು ಹಿಂದೇಟು ಹಾಕಿದ್ದಾರೆ. ನಟ ಡಾಲಿ ಧನಂಜಯ್ ಕೂಡ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಲು ಸಿದ್ಧರಿರಲಿಲ್ಲ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅವರನ್ನು ಟ್ರೋಲ್ ಮಾಡಿದ್ದರು. ಈಗ ಡಾಲಿ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ ಬಗ್ಗೆ ಮೌನ ಮುರಿದಿದ್ದು, ಇಷ್ಟು ದಿನ ತಾವು ಯಾಕೆ ಮಾತನಾಡಲಿಲ್ಲ ಎಂಬುದನ್ನು ತಿಳಿಸಿದ್ದಾರೆ.
‘ನಮ್ಮ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. ಆಗ ನಮ್ಮ ‘ಕೋಟಿ’ ಸಿನಿಮಾದ ರಿಲೀಸ್ ಸಂದರ್ಭವಾಗಿತ್ತು. ಅದರ ಮಧ್ಯ ನಡೆದ ಘಟನೆ ಇದು. ಅದನ್ನು ಬಿಟ್ಟುಬಿಡೋಣ. ಆದರೆ, ಏನು ಮಾತನಾಡೋದು ಅಂತ? ಅಲ್ಲಿ ಒಂದು ಜೀವ ಹೋಗಿದೆ, ಒಂದು ತಪ್ಪು ಆಗಿದೆ ಎಂದಾಗ ಆ ಮನುಷ್ಯನ ತಂದೆ-ತಾಯಿ ಮುಖ ನೋಡಿದಾಗ ಆತನ ಹೆಂಡತಿ ಹಾಗೂ ಮಗುವಿನ ಭವಿಷ್ಯ ನೋಡಿದಾಗ ಯಾರಿಗಾದರೂ ಖಂಡಿತಾ ಬೇಜಾರಾಗುತ್ತದೆ’ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.
‘ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಆ ಜೀವಕ್ಕೆ ಸಿಗಬೇಕಾದ ನ್ಯಾಯ ಸಿಗಲೇಬೇಕು. ಸಂತ್ರಸ್ಥರು ನಮ್ಮ ಮನೆಯವರಾಗಿದ್ದರೆ ಏನು ಅನಿಸುತ್ತದೆ ಎಂಬುದು ಮುಖ್ಯ. ಅದೇ ವೇಳೆಗೆ, ಆರೋಪ ಬಂದಿರುವುದು ಕೂಡ ನಮ್ಮ ಮನೆಯವರ ಮೇಲೆ ಆಗಿದ್ದರೆ ನಮಗೆ ಏನು ಅನಿಸುತ್ತದೆ? ಅದು ಕೂಡ ಬೇಜಾರರಾಗುತ್ತದೆ. ಮೊದಲಿಗೆ ವಿಷಯ ಗೊತ್ತಾದಾಗ ನನಗೂ ತುಂಬ ಬೇಸರ ಆಗಿತ್ತು’ ಎಂದು ಡಾಲಿ ಹೇಳಿದ್ದಾರೆ.
‘ಒಂದು ಕಡೆ ಹತ್ಯೆಯಾದ ಜೀವಕ್ಕೆ ಸ್ಪಂದಿಸಬೇಕು. ಇನ್ನೊಂದು ಕಡೆ ನಾವು ತುಂಬ ಪ್ರೀತಿಸಿದವರು. ಅವರ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಾಗ ಅದು ಕೂಡ ನಮಗೆ ಬೇಸರವಾಗಿರುತ್ತದೆ. ಇಲ್ಲಿ ಯಾವುದನ್ನೂ ನಾವು ಸಮರ್ಥನೆ ಮಾಡೋಕೆ ಆಗಲ್ಲ. ಎಲ್ಲದಕ್ಕೂ ಕಾನೂನು ಇದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಅದರ ಮೂಲಕ ಏನು ಆಗಬೇಕೋ ಅದು ಆಗುತ್ತದೆ. ಅದನ್ನು ಬಿಟ್ಟು ನಾವು ಏನೇ ಮಾತಾಡಿದರೂ ಪ್ರಯೋಜನ ಇಲ್ಲ’ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.