ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ & ಆಪ್ತನ ನಿವಾಸದಲ್ಲಿ ಇಡಿ ತಪಾಸಣೆ ಮುಂದುವರಿದಿದೆ.
ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಮನೆಗಳಲ್ಲಿ ನಿನ್ನೆ ಹಗಲು ಆರಂಭವಾದ ಇಡಿ ಪರಿಶೀಲನೆ ನಿನ್ನೆ ರಾತ್ರಿಯೂ ಮುಂದುವರಿದಿದ್ದಲ್ಲದೆ, ಇಂದು ಮುಂಜಾನೆಯಿಂದ ಮತ್ತೆ ಮುಂದುವರಿದಿದೆ
ಸಚಿವ ನಾಗೇಂದ್ರ ನಿವಾಸದಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳಿಂದ ಇಡಿ ಪರಿಶೀಲನೆ ನಡೆಯುತ್ತಿದೆ. ಶಾಸಕ ದದ್ದಲ್ ಮನೆ, ನಿವಾಸ ಸೇರಿ ಉಳಿದ ಕಡೆಯೂ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ. ಒಟ್ಟು ಹದಿನೆಂಟು ಕಡೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ರಾತ್ರಿ ಹನ್ನೆರಡು ಗಂಟೆಗೆ ಅಧಿಕಾರಿಗಳು ದಾಳಿಗೆ ವಿರಾಮ ನೀಡಿದ್ದರು. ಆದರೆ ದಾಳಿ ಮಾಡಿದ್ದ ಸ್ಥಳದಲ್ಲೆ ಉಳಿದುಕೊಂಡಿದ್ದರು.
ಒಂದು ತಂಡ ನಾಗೇಂದ್ರ ನಿವಾಸದಲ್ಲಿ ಹಾಗೂ ಇನ್ನೊಂದು ತಂಡ ದದ್ದಲ್ ನಿವಾಸದಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಗ್ಗೆ 6:30-7
ಗಂಟೆ ಬಳಿಕ ಮತ್ತೆ ಪರಿಶೀಲನೆ ಆರಂಭಿಸಿದ್ದಾರೆ. ಇಂದು ಸಹ ಪೂರ್ತಿ ದಿನ ವಿಚಾರಣೆ ನಡೆಯಲಿದೆ ಎಂದು ಊಹಿಸಲಾಗಿದೆ. ದಾಳಿ ಮಾಡಿರುವ ಎಲ್ಲಾ ಕಡೆ ಸಮಗ್ರ ತಪಾಸಣೆ ಮುಗಿಯುವವರೆಗೂ ಅಧಿಕಾರಿಗಳು ಸ್ಥಳ ಬಿಟ್ಟು ಕದಲುವುದಿಲ್ಲ
ನಿನ್ನೆ ಒಂದೇ ಕಾಲಕ್ಕೆ ಹದಿನೆಂಟಕ್ಕೂ ಹೆಚ್ಚು ಸ್ಥಳದಲ್ಲಿ ತಪಾಸಣೆ ನಡೆಸಲಾಗಿತ್ತು. ಎಲ್ಲಾ ದಾಳಿ ಸ್ಥಳಗಳಲ್ಲಿ ಏನೆಲ್ಲಾ ದೊರೆತಿದೆ ಎಂದು ಪರಿಶೀಲನೆ ಮಾಡಿ, ನಂತರ ಇಂಟರ್ ಲಿಂಕ್ ಹೊಂದಿರುವ ಸ್ಥಳದಲ್ಲಿ ಮತ್ತೆ ದಾಖಲೆಗಳ ಪರಿಶೀಲನೆ ನಡೆಯುವುದಿದೆ
ಬಿ. ನಾಗೇಂದ್ರ ಹಾಗೂ ಬಸವನಗೌಡ ದದ್ದಲ್ ನಿವಾಸಗಳ ಜತೆಗೆ ಮೂವರು ಯೂನಿಯನ್ ಬ್ಯಾಂಕ್ ಸಿಬ್ಬಂದಿ ಮನೆಯ ಮೇಲೂ ಇಡಿ ದಾಳಿ ನಡೆಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರವಾದ್ದರಿಂದ ವಸಂತನಗರದಲ್ಲಿರುವ ವಾಲ್ಮೀಕಿ ನಿಗಮದ ಕಚೇರಿಗೂ ಇಡಿ ರೇಡ್ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ