ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಸಂಚಾರ ನಿಯಮ ಉಲ್ಲಂಘನೆಯ ಮೇಲಿನ ಶೇ.50 ರಿಯಾಯಿತಿಯ ಲಾಭವನ್ನು ಪಡೆದುಕೊಂಡಿದೆ. ಶೇ. 50ರ ರಿಯಾಯಿತಿ ಸೌಲಭ್ಯದಡಿಯಲ್ಲಿ ಬಿಎಂಟಿಸಿ ನಿಗಮವು ಲಕ್ಷಾಂತರ ರೂಪಾಯಿ ದಂಡ ಕಟ್ಟಲು ಸಿದ್ಧತೆ ಮಾಡಿಕೊಂಡಿದೆ. ಸಂಚಾರ ನಿಯಮ ಉಲ್ಲಂಘನೆಯ ನಿಮಯದ ಮೇಲೆ ಅರ್ಧದಷ್ಟು ಕೊಡುಗೆ ಘೋಷಿಸಿದ ಬಳಿಕ ವಾಹನ ಸವಾರರು ಮುಗಿಬಿದ್ದು, ಸರತಿ ಸಾಲಲ್ಲಿ ನಿಂತು ದಂಡ ಕಟ್ಟಿದ್ದು ಗೊತ್ತೇ ಇದೆ. ಅದೇ ರೀತಿ ಸರ್ಕಾರಿ ವ್ಯಾಪ್ತಿಯ ಬಿಎಂಟಿಸಿ ಸಹ ಒಟ್ಟು 33,00,000 ಲಕ್ಷ ರೂಪಾಯಿ ದಂಡ ಪಾವತಿಸಲಿದೆ.
ನಿತ್ಯ ನಗರದ ತುಂಬೆಲ್ಲ ಓಡಾಡುವ, ಸಾರಿಗೆ ಸೇವೆ ನೀಡುವ ಈ ಬಿಎಂಟಿಸಿ ಬಸ್ಗಳ ವಿರುದ್ಧ ಸಿಗ್ನಲ್ ಜಂಪ್, ನಿಷೇಧಿತ ಸ್ಥಳದಲ್ಲಿ ನಿಲುಗಡೆ ಸೇರಿದಂತೆ ಒಟ್ಟು 12,000 ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಸಂಚಾರ ಪೊಲೀಸ್ ಇಲಾಖೆ ಚಲನ್ ಹೊರಡಿಸಿದೆ. ಇಷ್ಟು ಪ್ರಮಾಣದ ಪ್ರಕರಣಗಳಿಂದ ಬಿಎಂಟಿಸಿಗೆ ಒಟ್ಟು 66ಲಕ್ಷ ರೂಪಾಯಿ ದಂಡ ಬಿದ್ದಿದೆ. ಆದರೆ ಸದ್ಯ ಎರಡನೇ ಬಾರಿಗೆ ಸರ್ಕಾರ ಶೇ. 50ರ ರಿಯಾಯಿತಿ ಘೊಷಿಸಿದೆ. ಹೀಗಾಗಿ ಬಿಎಂಟಿಸಿ ಅರ್ಧದಷ್ಟು ಅಂದರೆ 33 ಲಕ್ಷ ರೂಪಾಯಿಯನ್ನು ದಂಡವಾಗಿ ಕಟ್ಟಲು ನಿರ್ಧರಿಸಿದೆ.