ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೀಗ ಒಂದೊಂದೇ ಹಗರಣಗಳ ಏಟು ಬೀಳತೊಡಗಿದೆ. ವಾಲ್ಮೀಕಿ , ಮೂಡಾ ಹಗರಣದ ಕುಣಿಕೆಗೆ ಸಿಲುಕಿರೋ ಸರ್ಕಾರವನ್ನ ಹೆಡೆಮುರಿ ಕಟ್ಟಿ ಪಕ್ಕಕ್ಕಿಡಲು ವಿಪಕ್ಷ ಬಿಜೆಪಿ ಅಗತ್ಯ ಕಾರ್ಯತಂತ್ರ ರೂಪಿಸುತ್ತಿದೆ.
ಸದನದಲ್ಲೂ, ಸದನದ ಹೊರಗೂ ಈ ವಿಚಾರಗಳನ್ನ ಪ್ರಸ್ತಾಪಿಸಿ ಸರ್ಕಾರಕ್ಕೆ ಮುಜುಗರ ತರಲು ರೆಡಿಯಾಗ್ತಿದೆ. ಇದಕ್ಕಾಗಿ ಇಂದು ಬೆಂಗಳೂರಿನಲ್ಲೊಂದು ಪೂರ್ವಭಾವಿ ಸಭೆಯನ್ನ ಬಿಜೆಪಿ ನಾಯಕರು ನಡೆಸಿ ಅಗತ್ಯ ತಯಾರಿ ಬಗ್ಗೆ ಚರ್ಚೆ ನಡೆಸಿದ್ರು
ಮಳೆಗಾಲದ ಅಧಿವೇಶನಕ್ಕೆ ಸಿದ್ದವಾಗ್ತಿರೋ ರಾಜ್ಯ ಸರ್ಕಾರವನ್ನ ಹಗರಣದ ಉರುಳಲ್ಲಿ ಸಿಲುಕಿಸಲು ರಾಜ್ಯ ಬಿಜೆಪಿ ಸಿದ್ದತೆ ಮಾಡಿಕೊಳ್ತಿದೆ. ವಾಲ್ಮೀಕಿ ನಿಗಮದ ಅಕ್ರಮ, ಮೈಸೂರು ಮೂಡಾ ಸೈಟು ಹಂಚಿಕೆ ಅಕ್ರಮ, ಗ್ಯಾರಂಟಿಗಳಿಗೆ ಪರಿಶಿಷ್ಟರ ನಿಧಿ ಹಣ ಬಳಕೆ ಹೀಗೆ ಸಾಲು ಸಾಲು ವಿಚಾರಗಳನ್ನ ಮುಂದಿಟ್ಟು ಇಕ್ಕಟ್ಟಿನಲ್ಲಿ ಸಿಲುಕಿಸಲು ಕಾರ್ಯತಂತ್ರ ರೂಪಿಸಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮೂಡಾ ಅಕ್ರಮದ ದಾಖಲೆ ಬಿಡುಗಡೆ ಮಾಡಿದ ಬಿಜೆಪಿ ಸಿಎಂ ವಿರುದ್ಧ ಸಮರ ಸಾರಿದೆ….
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕರ ಅಶೋಕ ನೇತೃತ್ವದಲ್ಲಿ ಸಭೆ ಸೇರಿದ್ದ ಬಿಜೆಪಿಯ ಹಲವು ಮುಖಂಡರು ಸದನದಲ್ಲಿ ಸರ್ಕಾರ ಕಟ್ಟಿ ಹಾಕುವ ವಿಚಾರವಾಗಿ ಚರ್ಚಿಸಿದರು. ಒಂದು ಗಂಟೆಗೂ ಅಧಿಕ ಕಾಲ ನಡೆದ ಸಭೆಯ ಬಳಿಕ ಮಾತನಾಡಿದ ರಾಜ್ಯಾಧ್ಯಕ್ಷ ವಿಜಯೇಂದ್ರ, ಅಧಿವೇಶನದಲ್ಲಿ ಯಾವ್ಯಾವ ವಿಚಾರ ಪ್ರಸ್ತಾಪ ಮಾಡಬೇಕು ಅಂತಾ ಚರ್ಚಿಸಿದ್ದೇವೆ. ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳು ದೇಶಾದ್ಯಂತ ಸುದ್ದಿಯಾಗಿವೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಸದನದ ಒಳಗೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ವಿಷಯಗಳ
ಕುರಿತು ಚರ್ಚೆ ಮಾಡಿದ್ದೇವೆ. ಎರಡೂ ಮನೆಗಳಲ್ಲಿ ಹೋರಾಟದ ಬಗ್ಗೆ ಚರ್ಚೆ ಮಾಡದ್ದೇವೆ. ಇದರ ಜೊತೆ ಜೊತೆಗೆ ನಾಳೆ ಅಥವಾ ನಾಡಿದ್ದರಲ್ಲಿ ಮೈತ್ರಿ ಪಕ್ಷಗಳ ಮುಖಂಡರು ಕುಳಿತು ಚರ್ಚೆ ಮಾಡುತ್ತೇವೆ. ಶುಕ್ರವಾರ ಮೈಸೂರಿನಲ್ಲಿ ಮೂಡಾ ಪ್ರತಿಭಟನೆ ಖಂಡಿಸಿ ಪ್ರತಿಭಟನೆ ಮಾಡ್ತೀವಿ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಕೇಸ್ CBI ಗೆ ಕೊಡೋವರೆಗು ಬಿಡಲ್ಲ ಎಂದ್ರು ವಿಜಯೇಂದ್ರ….
ಬಳಿಕ ಮಾತನಾಡಿ ವಿಪಕ್ಷ ನಾಯಕ ಆರ್ ಅಶೋಕ್ ವಿಧಾನಸಭೆಯಲ್ಲಿ ಆಗಬೇಕಿರುವ ಹೋರಾಟದ ಬಗ್ಗೆ ಚರ್ಚೆ ಮಾಡಿದ್ದೇವೆ. ಡೆಂಗ್ಯೂ, ಕಾಲರಾ, ಝೀಕಾ ವೈರಸ್ ಬಗ್ಗೆ ಚರ್ಚೆ ಮಾಡುತ್ತೇವೆ. ಮೂಡಾ, ವಾಲ್ಮೀಕಿ ನಿಗಮದ ಹಗರಣ, ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲಿದ್ದೇವೆ. ಹಾಗೆಯೇ ಕಾನೂನು ಮತ್ತು ಸುವ್ಯವಸ್ಥೆ ವೈಫಲ್ಯ, ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ, ಬೆಲೆ ಏರಿಕೆ, ಹಾಲಿನ ಬೆಲೆ ಏರಿಕೆ, ಸಬ್ಸಿಡಿ ವಿಚಾರವೂ ಪ್ರಸ್ತಾಪವಾಗಲಿದೆ. ಸರ್ಕಾರವನ್ನ ಪ್ರತಿ ಹೆಜ್ಜೆಯಲ್ಲೂ ಹಿಡಿದು ನಿಲ್ಲಿಸಿ ಉತ್ತರ ಕೇಳುತ್ತೇವೆ ಅಂತ ಹೇಳಿದ್ರು ಅಶೋಕ
ಬಿಜೆಪಿಯ ತಂತ್ರಗಾರಿಕೆ, ಆರೋಪ, ಹೋರಟಕ್ಕೆ ಸಿಎಂ ಸಿದ್ದರಾಮಯ್ಯ ಟಕ್ಕರ್ ಕೊಟ್ಟಿದ್ದಾರೆ ನನ್ನ ಹೆಂಡತಿಗೆ ಕೊಟ್ಟಿರೋ ಸೈಟ್ ಅನ್ನ ಇಶ್ಯೂ ಮಾಡಬೇಕು ಅಂತ ಹೊರಟಿದ್ದಾರೆ. ಎಲ್ಲವೂ ಲೀಗಲ್ ಆಗಿದೆ, ಏನೇ ಅಕ್ರಮ ನಡೆದಿದ್ರು ತನಿಖೆ ಮಾಡಿಸ್ತಿದ್ದೀವಿ. ತನಿಖೆ ಆಗಿ ಏನು ರಿಪೋರ್ಟ್ ಬರುತ್ತೋ ನೋಡೋಣ ಕಾನೂನು ಬಾಹಿರ ಆಗಿದ್ರೆ ಕ್ರಮ ತಗೋತೀವಿ. ಬಿಜೆಪಿಯವರು ರಾಜಕೀಯವಾಗಿ ಪ್ರತಿಭಟನೆ ಮಾಡ್ತಿದ್ದಾರೆ ಸದನದಲ್ಲಿ ವಿಚಾರ ಪ್ರಸ್ಥಾಪ ಆದ್ರೆ ಉತ್ತರ ಕೊಡ್ತೀವಿ. ನಮ್ಮ ಪೊಲೀಸರು ಸಮರ್ಥವಾಗಿ ತನಿಖೆ ಮಾಡ್ತಿದ್ದಾರೆ ಅವರು ಎಷ್ಟು ಕೇಸ್ CBIಗೆ ಕೊಟ್ಟಿದ್ದಾರೆ, ಬಿಜೆಪಿಯವರು CBI ಅನ್ನ ಚೋರ್ ಬಚಾವ್ ಸಂಸ್ಥೆ ಅಂತಿದ್ರು ಈಗ CBIಗೆ ಕೊಡಿ ಅಂತಿದ್ದಾರೆ ಇದು ಯಾವ ರಾಜಕಾರಣ ಅಂತ ಪ್ರಶ್ನೆ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ…..
ಒಟ್ನಲ್ಲಿ ಕಾಂಗ್ರೆಸ್ ಸರ್ಕಾರವನ್ನ ಸದನದಲ್ಲಿ ಕಟ್ಟಿಹಾಕಲು ಬಿಜೆಪಿ ಪ್ಲಾನ್ ಮಾಡಿದೆ ಪ್ರಮುಖ ಅಸ್ತ್ರಗಳಾದ ವಾಲ್ಮೀಕಿ, ಮೂಡಾ ಜೊತೆ ಬೆಲೆ ಬಾಣಗಳನ್ನು ಹೂಡಲು ಸಜ್ಜಾಗಿದೆ ಕೇಸರಿ ಟೀಂ. ಶುಕ್ರವಾರ ಮೈಸೂರಿನಲ್ಲಿ ಬೃಹತ್ ಹೋರಾಟ ಮಾಡೋ ಮೂಲಕ ಸಿಎಂ ಸಿದ್ದರಾಮಯ್ಯ ಗೆ ಟಾಂಗ್ ಕೊಡುವ ಮೂಲಕ ರಣಕಹಳೆ ಮೊಳಗಿಸ್ತಿದೆ