ಬೆಂಗಳೂರು: ಇಷ್ಟು ದಿನ ಕೇವಲ 5 ರೂಪಾಯಿಗೆ ಸಿಗುತ್ತಿದ್ದ ಶುದ್ದ ಕುಡಿಯುವ ನೀರು ಇದೀಗ ದುಬಾರಿಯಾಗಿದೆ. ಪ್ರತಿ 20 ಲೀಟರ್ಗೆ 5 ರಿಂದ 10 ರೂಗೆ ಏರಿಕೆ ಮಾಡುವ ಮೂಲಕ ನೀರಿನ ನಿರ್ವಹಣೆ ಮಾಡುವ ಏಜೆನ್ಸಿಗಳು ಸಾರ್ವಜನಿಕರಿಗೆ ಬೆಲೆ ಏರಿಕೆ ಶಾಕ್ ನೀಡುತ್ತಿದ್ದಾರೆ.
ವಿದ್ಯುತ್ ಬಿಲ್ ಮತ್ತು ಘಟಕದ ನಿರ್ವಹಣಾ ವೆಚ್ಚ ಹೆಚ್ಚಾಗಿದೆ ಎಂಬ ಕಾರಣ ನೀಡಿ ಆರ್ಒ ಘಟಕಗಳ ನಿರ್ವಹಣೆ ಮಾಡುವ ಹಲವು ಏಜೆನ್ಸಿಗಳು ದರವನ್ನು 5 ರಿಂದ 10 ರೂ.ಗೆ ಏರಿಕೆ ಮಾಡಿದ್ದಾರೆ. ಇದರಿಂದಾಗಿ 5 ರೂ.ನ ಎರಡು ನಾಣ್ಯಗಳನ್ನು ಬಳಸಿ 20 ಲೀಟರ್ ನೀರು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿ 1052 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಕುಡಿಯುವ ನೀರಿಗಾಗಿ ಘಟಕಗಳನ್ನು ಅವಲಂಬಿಸಿರುವ ಜನ, ನಿತ್ಯವೂ 5 ರೂ. ನಾಣ್ಯ ಬಳಸಿ 20 ಲೀಟರ್ ನೀರು ಪಡೆಯುತ್ತಿದ್ದರು. ಆದರೆ, ಈಗ 5 ರೂನ ಎರಡು ನಾಣ್ಯಗಳನ್ನು ಯಂತ್ರಕ್ಕೆ ಹಾಕಬೇಕಾಗಿದೆ.
ರಸ್ತೆ ಬದಿಯಲ್ಲಿ ಫಾಸ್ಟ್ ಫುಡ್, ಚಾಟ್ಸ್ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು, ಪಿಜಿಗಳ ನಿರ್ವಹಣೆ ಮಾಡುವವರು, ಮನೆಯಲ್ಲಿ ನೀರು ಶುದ್ಧೀಕರಿಸಲು ಸಾಧ್ಯವಾಗದ ಅನೇಕರು ಕುಡಿಯಲು ಆರ್ಒ ಪ್ಲಾಂಟ್ಗಳ ನೀರನ್ನೇ ಅವಲಂಬಿಸಿದ್ದಾರೆ. ಸದ್ಯ ಯಾವುದೇ ಸೂಚನೆ ನೀಡದೇ ನೀರಿನ ಬೆಲೆ ಏರಿಕೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಗಾಯತ್ರಿ ನಗರ ನಿವಾಸಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದರು.