ಸ್ಪಷ್ಟ ಕನ್ನಡದ ನಿರೂಪಣೆ ಮೂಲಕ ಕೋಟ್ಯಾಂತರ ಕನ್ನಡಿಗರ ಮನಗೆದ್ದ ಅಪರ್ಣಾ ನಿಧನ ಕನ್ನಡಿಗರಿಗೆ ತೀವ್ರ ನೋವು ತರಿಸಿದೆ. ಕಳೆದ ಒಂದು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಪತ್ನಿಯನ್ನು ಪತಿ ನಾಗರಾಜ್ ರಾಮಸ್ವಾಮಿ ವತ್ಸಾರೆ ಆರೈಕೆ ಮಾಡಿದ್ದಾರೆ. ಈ ವೇಳೆ ಪತ್ನಿ ಆಸ್ಪತ್ರೆಗೆ ದಾಖಲಾಗಿ ಮೂರು ದಿನಗಳ ಬಳಿಕ ಪತಿ ಆಸ್ಪತ್ರೆಯಲ್ಲೇ ಕವಿತೆ ಬರೆದಿದ್ದಾರೆ. ತಮ್ಮ ನೋವನ್ನು ಕವನದ ಮೂಲಕ ವ್ಯಕ್ತಪಡಿಸಿದ್ದರು. ಅಪರ್ಣಾ ಕ್ಷೀಣಿಸುತ್ತಿರುವ ಆರೋಗ್ಯ, ಮರಳಿ ಬಂದು ಕೈಹಿಡಿಯುತ್ತಾಳೆ ಅನ್ನೋ ಭರವಸೆಯೊಂದಿಗೆ ಬರೆದ ಕವನ ಇದೀಗ ಪ್ರತಿಯೊಬ್ಬರ ಕಣ್ಣಂಚು ತೇವಗೊಳಿಸುತ್ತಿದೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಅಪರ್ಣಾ ಅವರ ಆರೋಗ್ಯ ಕಳೆದೊಂದು ವಾರದಿಂದ ಬಿಗಡಾಯಿಸಿತ್ತು. ಅಪರ್ಣರನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಪರ್ಣಾ ಆರೋಗ್ಯ ಚೇತರಿಕೆ ಕಾಣಲಿಲ್ಲ. ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಪತ್ನಿ ಆರೈಕೆಯಲ್ಲಿದ್ದ ನಾಗರಾಜ್ ಅರ್ಥಗರ್ಭಿತ ಕವನದ ಮೂಲಕ ನೋವು ತೋಡಿಕೊಂಡಿದ್ದರು.
ಅಪರ್ಣ ಸಾವಿಗೂ ಮುನ್ನ ನಾಗರಾಜ್ ರಾಮಸ್ವಾಮಿ ವತ್ಸರೆ ಬರೆದ ಕವನ ಇಲ್ಲಿದೆ.
ಬೆಳಗಿಕೊಂಡಿರೆಂದು
ಕಿಡಿ ತಾಕಿಸಿ ಹೊರಟಿತು
ಹೆಣ್ಣು
ಚಿತ್ತು ತೆಗೆದು
ಬತ್ತಿಯ ನೆತ್ತಿ ಚೆನ್ನಾಗಿಸಿ
ತಿರುಪಿ ತಿದ್ದಿ
ಇರು
ತುಸುವಿರೆಂದು ಕರೆದರೂ
ನಿಲ್ಲದೆಯೇ
ಬೇರಾವುದೋ ಕರೆಗೆ
ತಣ್ಣಗೆ ಓಗೊಟ್ಟ ಮೇರೆ
ಯಲ್ಲಿ
ಒಂದೇ ಒಂದು
ನಿಮಿಷ
ಬಂದೇನೆಂದು ಕಡೆಗಳಿಗೆ
ಯ ಸೆರಗಿನ ಬೆನ್ನಿನಲ್ಲಿ
ಅಂದು.
ಕಾದಿದ್ದೇನೆ
ಈಗ ಬಂದಾಳೆಂದು
ಆಗ ಬಂದಾಳೆಂದು
ಮರಳಿ
ಜೀವ ತಂದಾಳೆಂದು
ಇದು
ಮೂರನೇ ದಿವಸ
ಇಷ್ಟಾಗಿ
ಬೆಳಗಲಿಟ್ಟ ಕಿರಿಸೊಡರ
ಬೆಳಕು ನಾನು
ಉರಿವುದಷ್ಟೇ ಕೆಲಸ
ಇರುವ ತನಕ.
ಆಸ್ಪತ್ರೆ ದಾಖಲಾದ ಮೂರನೇ ದಿನ ಪತ್ನಿ ಅಪರ್ಣಾ ಕುರಿತು ಬರೆದ ಕವನವಿದು. ಪ್ರತಿ ಅಕ್ಷರದಲ್ಲೂ ತಮ್ಮ ನೋವು ತೋಡಿಕೊಂಡಿದ್ದಾರೆ. ಜೊತೆಗೆ ಅಪರ್ಣಾ ಮತ್ತೆ ಚೈತನ್ಯದ ನಗು ತುಂಬಿ ಜೀವನಕ್ಕೆ ಮರಳುತ್ತಾಳೆ ಅನ್ನೋ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಅಪರ್ಣಾ ಇಹಲೋಕ ತ್ಯಜಿಸಿದ್ದಾರೆ. ಇದೀಗ ಈ ಕವನದ ಒಂದೊಂದು ಸಾಲುಗಳು ಎದೆಗೆ ನಾಟುವಂತಿದ್ದು ಪ್ರತಿಯೊಬ್ಬರ ಕಣ್ಣಂಚು ತೇವವಾಗುವಂತೆ ಮಾಡಿದೆ.