ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತು ಖಾಸಗಿ ಮಾರಾಟಗಾರರ ಜೊತೆಗಿನ ಸಚಿವಾಲಯದ ಒಪ್ಪಂದಗಳಿಗೆ ಸಂಬಂಧಿಸಿದ ಲಂಚದ ಆರೋಪಗಳ ಮೇಲೆ ಇಂಡೊನೇಷ್ಯಾದ ಮಾಜಿ ಕೃಷಿ ಸಚಿವರಿಗೆ ಇಂಡೊನೇಷ್ಯಾದ ಭ್ರಷ್ಟಾಚಾರ ತಡೆ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆನೀಡಿ ಆದೇಶ ಹೊರಡಿಸಿದೆ.
ಮಾಜಿ ಸಚಿವ ಸಯಹ್ರುಲ್ ಯಾಸಿನ್ ಲಿಂಪೂ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು, ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. 10 ವರ್ಷದ ಜೈಲು ವಾಸದ ಜತೆಗೆ ಅವರು ₹15.45 ಲಕ್ಷ ದಂಡ ಪಾವತಿಸಬೇಕು. ಒಂದು ವೇಳೆ ದಂಡ ಪಾವತಿಸಲು ವಿಫಲರಾದರೆ, ಇನ್ನೂ ನಾಲ್ಕು ತಿಂಗಳು ಜೈಲು ಶಿಕ್ಷೆ ಎದುರಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಅಧ್ಯಕ್ಷ ಜೊಕೊ ವಿಡೋಡೊ ಅವರ ಅಧಿಕಾರವಾಧಿ ಅಕ್ಟೋಬರ್ನಲ್ಲಿ ಕೊನೆಗೊಳ್ಳಲಿದೆ. ಅವರ ಸಂಪುಟದ ಇತರ ಐವರು ಸದಸ್ಯರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.