ಆಕೆಯ ಧ್ವನಿಯಲ್ಲಿ ಹೊಮ್ಮುತ್ತಿದ್ದ ಕನ್ನಡ ನುಡಿಗಳು ಎಂಥವರನ್ನೂ ತಲೆದೂಗುವಂತೆ ಮಾಡುತ್ತಿತ್ತು, ಭಾಷೆಗೆ ತಕ್ಕ ಭಾವನೆ, ಅಚ್ಚ ಕನ್ನಡವನ್ನು ಸ್ವಚ್ಛವಾಗಿ ಮಾತನಾಡುವ ಶೈಲಿ, ಪದಕ್ಕೆ ಪದ ಸೇರಿಸಿ ಅಕ್ಷರಗಳಿಗೂ ಭಾವ ತುಂಬುತ್ತಿದ್ದ ದನಿ ಇಂದು ಚಿರಮೌನಕ್ಕೆ ಜಾರಿದೆ.
ಸಾಲು ಸಾಲು ಸಿನಿಮಾಗಳು, ಕಿರುತೆರೆ, ವೇದಿಕೆಗಳಲ್ಲಿ ಮನೋಜ್ಞ ನಿರೂಪಣೆ ಮೂಲಕವೇ ಕನ್ನಡಿಗರ ಮನಗೆದ್ದಿದ್ದ ಅಪರ್ಣಾ ತಮ್ಮ ಮಾತುಗಳಿಗೆ ಪೂರ್ಣ ವಿರಾಮವನ್ನಿಟ್ಟಿದ್ದಾರೆ.
ಹೌದು. ಕನ್ನಡಿಗರ ಮನ ಗೆದ್ದಿದ್ದ ನಿರೂಪಕಿ ಅಪರ್ಣಾ ಅವರಿಂದು ಚಿರನಿದ್ರೆಗೆ ಜಾರಿದ್ದಾರೆ. ಹಲವು ತಿಂಗಳಿನಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅಪರ್ಣಾ ಅವರು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ಕನ್ನಡ ಸಿನಿ ರಂಗದ ನಟರು ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.
ನಮ್ಮ ಮೆಟ್ರೋಗೆ ದನಿಯಾಗಿದ್ದ ಅಪರ್ಣಾ:
ಯಶಸ್ವಿ ನಿರೂಪಕಿಯಾಗಿ 3 ದಶಕಗಳ ವರೆಗೆ ಕನ್ನಡ ಸೇವೆ ಸಲ್ಲಿಸಿದ ಅಪರ್ಣಾ, 2014 ರಲ್ಲಿ ಬೆಂಗಳೂರಿನ ʻನಮ್ಮ ಮೆಟ್ರೋʼದಲ್ಲಿ ಘೋಷಣೆಯಾಗುವ `ಪ್ರಯಾಣಿಕರು ಹತ್ತುವ, ಮತ್ತು ಇಳಿಯುವ ಸೂಚನೆʼಗೆ ಧ್ವನಿ ಗೂಡಿಸಿದ್ದರು.
ಸದ್ಯ ತಮ್ಮ ಕೊನೆ ಆಸೆ ಈಡೇರಿಸುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ ನಟಿ ಅಪರ್ಣಾ. ಈ ಬಗ್ಗೆ ಖುದ್ದಾಗಿ ಮಂಡ್ಯ ರಮೇಶ್ ಅವರೇ ಹೇಳಿಕೊಂಡಿದ್ದಾರೆ.
ಮಂಡ್ಯ ರಮೇಶ್ ಹೇಳಿದ್ದೇನು?
ಈ ಬಗ್ಗೆ ಮಾತಾಡಿದ ಮಂಡ್ಯ ರಮೇಶ್ ಅವರು, ಅಪರ್ಣಾಗೆ ಒಂದು ನಿರೂಪಣೆ ಶಾಲೆ ಮಾಡಬೇಕು ಅಂತ ಆಸೆ ಇತ್ತು. ನನ್ನ ಬಳಿ ಹೇಳಿಕೊಂಡಿದ್ದರು. ಅದು ಈಡೇರುವ ಮುನ್ನವೇ ನಮ್ಮನ್ನ ಬಿಟ್ಟು ಹೋದ್ರು ಎಂದು ಅಪರ್ಣಾ ಸಾವಿರ ಕಂಬನಿ ಮಿಡಿದ್ದಾರೆ.
ಅಪರ್ಣಾ 1989 ರಲ್ಲಿ ನಿರೂಪಕಿಯಾಗಿ ಟೆಲಿವಿಷನ್ ಸೇರಿದ್ರು. ಇವರು 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದಿಂದ ಬೆಳಕಿಗೆ ಬಂದವರು. ನಂತರ ಇನ್ಸ್ಪೆಕ್ಟರ್ ವಿಕ್ರಮ್ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದರು.
90ರ ದಶಕದಲ್ಲೇ ಚಂದನ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳನ್ನುನಿರೂಪಿಸಿದರು ಅಪರ್ಣಾ. ನಂತರ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. 1998 ರಲ್ಲೇ ದೀಪಾವಳಿ ಕಾರ್ಯಕ್ರಮದಲ್ಲಿ 8 ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು.