ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಹಾಗೂ ಬಾಲಿವುಡ್ ನಟಿ ಜಾಕ್ವೆಲಿನ್ ಕಳೆದ ಕೆಲ ತಿಂಗಳಿನಿಂದ ಸಖತ್ ಸುದ್ದಿಯಲ್ಲಿದ್ದಾರೆ. ಸುಕೇಶ್ ಜೈಲಿನಲ್ಲಿದ್ದರು ಆಗಾಗ ಪತ್ರದ ಮೂಲಕ ತಮ್ಮ ಪ್ರೇಮ ನಿವೇದನೆಯನ್ನು ನಟಿಗೆ ತಿಳಿಸುತ್ತಿದ್ದಾರೆ. ಇದೀಗ ಇವರಿಬ್ಬರ ಪ್ರೀತಿ ತೆರೆ ಮೇಲೆ ಬರಲು ಸಜ್ಜಾಗಿದೆ,
ಖತರ್ನಾಕ್ ಕಿಲಾಡಿ ಸುಕೇಶ್ ಹಾಗೂ ಜಾಕ್ವೆಲಿನ್ ಪ್ರೇಮದ ಕಥೆಯನ್ನೇ ಸಿನಿಮಾ ಮಾಡಲು ಬಿಟೌನ್ ನಿರ್ದೇಶಕರೊಬ್ಬರು ಮುಂದಾಗಿದ್ದಾರೆ. ಕೋಟಿ ಕೋಟಿ ಲೂಟಿ ಮಾಡಿದ್ದ ಸುಕೇಶ್, ಬಾಲಿವುಡ್ ನಟಿಮಣಿಯರನ್ನ ಬುಟ್ಟಿಗೆ ಹಾಕಿಕೊಂಡ ಕಥೆಯನ್ನ ಈಗ ಸಿನಿಮಾ ಮಾಡ್ತಿದ್ದಾರೆ.
ಸುಕೇಶ್ನ ವಂಚನೆ ಪ್ರಕರಣಗಳ ಜೊತೆಗೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಲವ್ ಸ್ಟೋರಿಯನ್ನ ಮುಖ್ಯವಾಗಿರಿಸಿಕೊಂಡು ಸಿನಿಮಾ ಮಾಡಲು ಬಾಲಿವುಡ್ ನಿರ್ದೇಶಕ ಆನಂದ್ ಕುಮಾರ್ ರೆಡಿಯಾಗಿದ್ದಾರೆ.
ತಿಹಾರ್ ಜೈಲಿನ ಜೈಲರ್ ದೀಪಕ್ ಶರ್ಮಾ ಅವರನ್ನ ಇತ್ತೀಚಿಗೆ ನಿರ್ದೇಶಕ ಆನಂದ್ ಕುಮಾರ್ ಭೇಟಿಯಾಗಿದ್ದಾರೆ. ಸುಕೇಶ್ನ ಕಥೆಯನ್ನು ಸಿನಿಮಾ ಮಾಡಲು ಯೋಜನೆ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ದೀಪಕ್ ಶರ್ಮಾ ಅವರು ನಿರ್ದೇಶಕ ಆನಂದ್ ಜೊತೆಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಸುದ್ದಿಗೆ ಇನ್ನಷ್ಟು ಪುಷ್ಠಿ ಸಿಕ್ಕಂತಾಗಿದೆ.
ಆನಂದ್ ಕಳೆದೊಂದು ವರ್ಷದಿಂದಲೂ ಸುಕೇಶ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಸುಕೇಶ್ ವಿರುದ್ಧದ ಚಾರ್ಜ್ಶೀಟ್ಗಳು, ಹೇಳಿಕೆಗಳು ಇತರೆ ವಿಷಯಗಳನ್ನು ಸಂಗ್ರಹಿಸಿ ಅವುಗಳ ಮಾಹಿತಿ ಆಧರಿಸಿ ಕತೆಯನ್ನು ಸಿದ್ಧಪಡಿಸುತ್ತಿದ್ದಾರೆ. ಸುಕೇಶ್ರ ಕೆಲ ಆಪ್ತರನ್ನು ಸಹ ಆನಂದ್ ಈಗಾಗಲೇ ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವು ಸುಕೇಶ್ನ ಜೀವನದ ವಿಷಯಗಳ ಬಗ್ಗೆ ಇರಲಿದ್ದು, ಜಾಕ್ವೆಲಿನ್ ಫರ್ನಾಂಡಿಸ್ ರಿಯಲ್ ಕಥೆ ಸಿನಿಮಾದ ಪ್ರಧಾನ ಅಂಶವಾಗಿರಲಿದೆ ಎನ್ನಲಾಗುತ್ತಿದೆ.