ಮಲಾವಿ: ಆಗ್ನೇಯ ಆಫ್ರಿಕಾದ ಮಲಾವಿಗೆಅಪ್ಪಳಿಸಿರುವ ಫ್ರೆಡ್ಡಿ ಚಂಡಮಾರುತದ ಅಬ್ಬರದಿಂದ ಭಾರೀ ಮಳೆ ಜೊತೆಗೆ ಹಲವೆಡೆ ಭೂಕುಸಿತ ಸಂಭವಿಸಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 326ಕ್ಕೆ ಏರಿಕೆಯಾಗಿದೆ.
ನಿನ್ನೆಯ ಹೊತ್ತಿಗೆ ಸಾವಿನ ಸಂಖ್ಯೆ 225 ರಿಂದ 326 ಕ್ಕೆ ಏರಿಕೆಯಾಗಿದ್ದು, 183,159 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಮಲಾವಿಯದ ಅಧ್ಯಕ್ಷ ಲಾಝರಸ್ ಚಕ್ವೇರ ತಿಳಿಸಿದ್ದಾರೆ. ಮಳೆಯಿಂದ ಉಂಟಾದ ಪ್ರವಾಹ ಮತ್ತು ಮಣ್ಣಿನ ಕುಸಿತದಲ್ಲಿ ಸಿಲುಕೊಂಡಿರುವವರ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಸೇನೆ ಮತ್ತು ಪೊಲೀಸರನ್ನು ನಿಯೋಜಿಸಲಾಗಿದ್ದು, ಕಾರ್ಯಚರಣೆ ಮುಂದುವರೆದಿದೆ. 300 ಕ್ಕೂ ಹೆಚ್ಚು ತುರ್ತು ಶೆಲ್ಟರ್ಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿರುವ ಚಕ್ವೆರಾ, ಜಾಗತಿಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
ಕಳೆದ ಮೂರು ವಾರಗಳಲ್ಲಿ ಎರಡನೇ ಬಾರಿಗೆ ಆಫ್ರಿಕಾದ ಕರಾವಳಿಗೆ ಫ್ರೆಡ್ಡಿ ಚಂಡಮಾರುತ ಅಪ್ಪಳಿಸಿದ್ದು, ನೆರೆ ಪ್ರದೇಶ ಮೊಝಾಂಬಿಕ್ನಲ್ಲೂ ಸಹ ಸಾಕಷ್ಟು ಅನಾಹುತ ಸೃಷ್ಟಿಸಿದ್ದು, ಜನ ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ವಾರ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.
ನಮ್ಮಲ್ಲಿರುವ ಸಂಪನ್ಮೂಲಗಳ ಮಟ್ಟಕ್ಕಿಂತ ಹಲವು ಪಟ್ಟು ಅಧಿಕ ನಷ್ಟ ಸಂಭವಿಸಿದ್ದು, ಅಂತಾರಾಷ್ಟ್ರೀಯ ಸೆರವಿಗೆ ಮನವಿ ಮಾಡಿರುವುದಾಗಿ ಅಧ್ಯಕ್ಷ ಲಾಝರಸ್ ಚಕ್ವೇರ ಹೇಳಿದ್ದಾರೆ. ಚಂಡಮಾರುತದಿಂದ ಸಂತ್ರಸ್ತರಿಗೆ ನೆರವಾಗಲು ತಕ್ಷಣ 1.5 ದಶ ಲಕ್ಷ ಡಾಲರ್ ಬಿಡುಗಡೆ ಮಾಡಲಾಗುವುದು. ಕಳೆದ 13 ತಿಂಗಳಲ್ಲಿ ಮಲಾವಿಗೆ ಮೂರನೇ ಬಾರಿಗೆ ಚಂಡಮಾರುತ ಅಪ್ಪಳಿಸಿದ್ದು, ಇದು ಹವಮಾನ ಬದಲಾವಣೆಯ ನೈಜಕತೆಗೆ ಸಾಕ್ಷಿಯಾಗಿದ್ದು, ಇದೊಂದು ರಾಷ್ಟ್ರೀಯ ದುರಂತವಾಗಿದೆ ಎಂದು ಲಾಝರಸ್ ಚಕ್ವೇರ ತಿಳಿಸಿದ್ದಾರೆ.