ಕೊಲಂಬೊ: ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ಪ್ರವಾಸದ (India Tour Sri Lanka) ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ಇತ್ತೀಚೆಗೆ ನೂತನ ಮುಖ್ಯಕೋಚ್ ನೇಮಕಗೊಂಡ ಗೌತಮ್ ಗಂಭೀರ್ (Gautam Gambhir) ಅವರ ನೇತೃತ್ವದಲ್ಲಿ ಭಾರತ ಮೊದಲ ದ್ವಿಪಕ್ಷೀಯ ಸರಣಿಯನ್ನಾಡಲಿದೆ.
ಈ ಸರಣಿಯೊಂದಿಗೆ ಗಂಭೀರ್ ತಮ್ಮ ಮುಖ್ಯಕೋಚ್ ಕೋಚ್ ಅಭಿಯಾನವನ್ನು ಶುರುಮಾಡಲಿದ್ದಾರೆ.
ಪಂದ್ಯ ಎಲ್ಲಿ ಯಾವಾಗ?
ಇದೇ ಜುಲೈ 26ರಿಂದ ಆಗಸ್ಟ್ 7ರ ವರೆಗೆ ಭಾರತ, ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು, ಉಭಯ ತಂಡಗಳು ಮೂರು ಟಿ20 ಪಂದ್ಯಗಳು ಹಾಗೂ 3 ಏಕದಿನ ಪಂದ್ಯಗಳನ್ನಾಡಲಿವೆ. ಟಿ20 ಪಂದ್ಯಗಳು ಶ್ರೀಲಂಕಾದ ಪಲ್ಲೆಕೆಲೆ ಹಾಗೂ ಏಕದಿನ ಪಂದ್ಯಗಳು ರಾಜಧಾನಿ ಕೊಲಂಬೊ ಮೈದಾನದಲ್ಲಿ ನಡೆಯಲಿವೆ. ಟಿ20 ಪಂದ್ಯಗಳು ಸಂಜೆ 7 ಗಂಟೆಗೆ ಶುರುವಾದರೆ, ಏಕದಿನ ಪಂದ್ಯಗಳು ಮಧ್ಯಾಹ್ನ 2:30ರಿಂದ ಆರಂಭವಾಗಲಿದೆ.
ಯಾವ ದಿನ ಪಂದ್ಯ?
ಟಿ20 ಪಂದ್ಯಗಳು:
ಮೊದಲ ಪಂದ್ಯ – ಜುಲೈ 26
2ನೇ ಪಂದ್ಯ – ಜುಲೈ 27
3ನೇ ಪಂದ್ಯ – ಜುಲೈ 29
ಸ್ಥಳ: ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಪಲ್ಲೆಕೆಲೆ
ಏಕದಿನ ಪಂದ್ಯಗಳು
ಮೊದಲ ಪಂದ್ಯ – ಆಗಸ್ಟ್ 1
2ನೇ ಪಂದ್ಯ – ಆಗಸ್ಟ್ 4
3ನೇ ಪಂದ್ಯ – ಆಗಸ್ಟ್ 7
ಸ್ಥಳ: ಆರ್. ಪ್ರೇಮದಾಸ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಕೊಲಂಬೊ
ಯಾರಾಗ್ತಾರೆ ಟಿ20 ತಂಡ ನಾಯಕ?
2024ರ ಟಿ20 ವಿಶ್ವಕಪ್ ಟೂರ್ನಿ ಬಳಿಕ ಟಿ20 ಕ್ರಿಕೆಟ್ಗೆ ದಿಗ್ಗಜ ಕ್ರಿಕೆಟಿಗರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಗುಡ್ಬೈ ಹೇಳಿದ್ದಾರೆ. ಹಾಗಾಗಿ ಮುಂದೆ ಟಿ20 ತಂಡಕ್ಕೆ ನಾಯಕ ಯಾರಾಗ್ತಾರೆ ಅನ್ನೋ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ. ಕೆಲವರು ಹಾರ್ದಿಕ್ ನಾಯಕನಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏಕೆಂದರೆ 2023ರ ವರ್ಷಾರಂಭದಲ್ಲಿ ಪಾಂಡ್ಯ ನಾಯಕತ್ವದಲ್ಲೇ ಟೀಂ ಇಂಡಿಯಾ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದಿತ್ತು. ಹಾಗಾಗಿ ಟಿ20 ತಂಡದ ನಾಯಕನಾಗಿ ಪಾಂಡ್ಯ ಅವರೇ ಮುಂದುವರಿಯುವ ಸಾಧ್ಯತೆ ಎದ್ದು ಕಾಣುತ್ತಿದೆ ಎಂದು ಹಿರಿಯ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.