ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಪ್ತರು ಹಾಗೂ ಕುಟುಂಬಸ್ಥರ ಮಧ್ಯೆ ಸಿಂಪಲ್ ಆಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶಿವಣ್ಣ ನಟನೆಯ ಹೊಸ ಸಿನಿಮಾ ‘45’ ಪೋಸ್ಟರ್ ಟೀಸರ್ ಅನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದು ಅರ್ಜುನ್ ಜನ್ಯ ನಿರ್ದೇಶಿಸುತ್ತಿರುವ ಮೊದಲ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕೂಡ ಬಣ್ಣ ಹಚ್ಚಲಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನೀಡಿರುವ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಮೊದಲ ಚಿತ್ರ.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಶಿವಣ್ಣ ನಟನೆಯ ‘45’ ಸಿನಿಮಾದ ಪೋಸ್ಟರ್ ಟೀಸರ್ ಅನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ಓಜಿ (ಒರಿಜಿನಲ್ ಗ್ಯಾಂಗ್ಸ್ಟರ್) ಮತ್ತೆ ಪರಿಚಯಿಸುತ್ತಿದ್ದೇವೆ’ ಎಂಬ ಅಡಿಬರಹದೊಂದಿಗೆ ಟೀಸರ್ ವಿಡಿಯೊ ಶಿವರಾಜ್ ಕುಮಾರ್ ಹಂಚಿಕೊಂಡಿದ್ದಾರೆ. ಶಿವಣ್ಣ ಈ ಸಿನಿಮಾದಲ್ಲಿಯೂ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಮೂವರು ಹೆಸರಾಂತ ನಾಯಕನಟರ ಸಮಾಗಮದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಬಹು ನಿರೀಕ್ಷಿತ ಈ ಚಿತ್ರಕ್ಕೆ ಸದ್ಯದಲ್ಲೇ ಕ್ಲೈಮ್ಯಾಕ್ಸ್ ಭಾಗದ ಸಾಹಸ ಸನ್ನಿವೇಶ ಮೂವತ್ತು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ. ಇಷ್ಟು ದಿನಗಳ ಕಾಲ ಅಪಾರವೆಚ್ಚದಲ್ಲಿ, ಅದ್ದೂರಿಯಾಗಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿರುವುದು ಕನ್ನಡದಲ್ಲಿ ಇದೇ ಮೊದಲನೆಯದು ಎನ್ನಲಾಗುತ್ತಿದೆ.ಇನ್ನು ಈ ಚಿತ್ರದ ನಿರ್ದೇಶಕ ಅರ್ಜುನ್ ಜನ್ಯ ಅವರು ಜನಪ್ರಿಯ ಸಂಗೀತ ನಿರ್ದೇಶಕರೇ ಆಗಿರುವುದರಿಂದ ಚಿತ್ರದ ಹಾಡುಗಳ ಬಗ್ಗೆ ಕೂಡ ಸಾಕಷ್ಟು ನಿರೀಕ್ಷೆಯಿದೆ. .