ಕ್ಯಾನ್ಸರ್ ನಿಂದ ಬಳಲುತ್ತಿದ್ದ ಖ್ಯಾತ ನಟಿ ಹಾಗೂ ನಿರೂಪಕಿ ಅಪರ್ಣಾ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ತಮ್ಮ ಧ್ವನಿಯ ಮೂಲಕವೇ ಕೋಟ್ಯಾಂತರ ಕನ್ನಡಿಗರ ಹೃದಯ ಗೆದಿದ್ದ ಅಪರ್ಣಾ ಸಾವು ಪ್ರತಿಯೊಬ್ಬರಿಗೂ ಬರ ಸಿಡಿಲು ಬಡಿದಂತಾಗಿದೆ. ಅಪರ್ಣಾ ನಿಧನಕ್ಕೆ ಇಡಿ ಸ್ಯಾಂಡಲ್ವುಡ್ ಸಂತಾಪ ಸೂಚಿಸಿದೆ. ನಟ ಕಿಚ್ಚ ಸುದೀಪ್ ಅವರು ಎಕ್ಸ್ ಮೂಲಕ “ಸ್ವಚ್ಛ ಕನ್ನಡದ ಆ ನಿಮ್ಮ ದನಿ ನಮ್ಮ ನಡುವೆ ಸದಾ ಶಾಶ್ವತ”ಎಂದು ಬರೆದು ಸಂತಾಪ ಸೂಚಿಸಿದ್ದಾರೆ
.ʻʻಇದು ನಿಜಕ್ಕೂ ದುಃಖಕರ ಸಂಗತಿ. ಅಪರ್ಣಾ ಮೇಡಮ್. “ಸ್ವಚ್ಛ ಕನ್ನಡದ ಆ ನಿಮ್ಮ ದನಿ ನಮ್ಮ ನಡುವೆ ಸದಾ ಶಾಶ್ವತ”. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಆಳವಾದ ಸಂತಾಪಗಳುʼʼಎಂದು ಸುದೀಪ್ ಬರೆದುಕೊಂಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅಪರ್ಣಾ ಚಿಕಿತ್ಸೆ ಫಲಕಾರಿಯಾಗದೆ ಜುಲೈ 11ರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಶುಕ್ರವಾರ ಬೆಳಗ್ಗೆ ಅಂತಿಮ ದರ್ಶನದ ಬಳಿಕ ಬನಶಂಕರಿಯ ಚಿತಾಗಾರದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅತ್ಯಸಂಸ್ಕಾರ ನೆರವೇರಿಸಲಾಯಿತು.
ಅಪರ್ಣಾ ಸಾವಿನ ಸುದ್ದಿಯನ್ನು ತಿಳಿಸಿದ ಪತಿ ನಾಗರಾಜ್, ʻʻವೈಯಕ್ತಿವಾಗಿ ನಾನು ಅಪರ್ಣಾ ತುಂಬಾ ಖಾಸಗಿಯಾಗಿ ಬದುಕಿದವರು. ಅಷ್ಟೇ ಖಾಸಗಿಯಾಗಿ ನಾನು ಅವಳನ್ನು ಬಿಳ್ಕೊಡಲಿಕ್ಕೆ ಇಷ್ಟಪಡ್ತೀನಿ. ಹಾಗಂತ ಆಕೆ ನನಗೆ ಸೇರೋಕೆ ಮುಂಚೆನೇ ಹೆಚ್ಚಾಗಿ ಕರ್ನಾಟಕಕ್ಕೆ ಸೇರಿದವಳು. ಅಪರ್ಣಾಗೆ ಒಂದು ಆಶಯ ಇತ್ತು. ಸಾವಿನ ಬಳಿಕ ಮಾಧ್ಯಮಗಳ ಮುಂದೆ ಎಲ್ಲವನ್ನೂ ಹೇಳುವಂತೆ ತಿಳಿಸಿದ್ದಳು. ಎರಡು ವರ್ಷಗಳ ಹಿಂದೆ ಜುಲೈನಲ್ಲಿ ಶ್ವಾಸಕೋಶ ಕ್ಯಾನ್ಸರ್ ಅಂತಾ ಗೊತ್ತಾಯ್ತು. ಮೊದಲು ನೋಡಿದ ವೈದ್ಯರು ಇನ್ನೂ ಆರು ತಿಂಗಳು ಬದುಕಬಹುದು ಎಂದು ಹೇಳಿದ್ರು. ಆದರೆ ಆಕೆ ಛಲಗಾತಿ ನಾನು ಬದುಕ್ತಿನಿ ಎಂದು ಹೇಳ್ತಿದ್ಳು. ಅಲ್ಲಿಂದ ಜನವರಿತನಕ ಶಕ್ತಿಮೀರಿ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಿದ್ಳು. ಫೆಬ್ರವರಿಯಿಂದ ಕೈಚೆಲ್ಲಿದಳು. ಕ್ಯಾನ್ಸರ್ ಎಂದು ಗೊತ್ತಿದ್ದರೂ ಅವಳು ಒಂದೂವರೆ ವರ್ಷದಿಂದ ಛಲದಿಂದ ಬದುಕಿದ್ದಳು. ನಿಜಕ್ಕೂ ಅವಳು ಧೀರೆ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ನಾವಿಬ್ಬರೂ ಸೋತಿದ್ದೀವಿ. ಬರೋ ಅಕ್ಟೋಬರ್ಗೆ ಅವಳಿಗೆ 58 ವರ್ಷ ತುಂಬ್ತಿತ್ತುʼʼಎಂದು ಪ್ರೀತಿಯ ಮಡದಿಯನ್ನು ನೆನೆದು ಕಾಣ್ಣೀರು ಹಾಕಿದ್ದರು.