ಉಡುಪಿ:– ದೇವರ ಹಣ ಕದ್ದು ಎಸ್ಕೇಪ್ ಆಗಿದ್ದ ಖತರ್ನಾಕ್ ಕಳ್ಳನನ್ನು 24 ಗಂಟೆಯೊಳಗೆ ಅರೆಸ್ಟ್ ಮಾಡಲಾಗಿದೆ.
ಉಡುಪಿಯ ಚಿಟ್ಪಾಡಿ ಕಸ್ತೂರ್ಬಾ ನಗರ ಬಬ್ಬು ಸ್ವಾಮಿ ಸನ್ನಿಧಾನದಲ್ಲಿ ಜು.4 ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ನಡೆದಿತ್ತು. ಕಳ್ಳತನ ನಡೆದ ಮರುದಿನ ಅಂದರೆ ಜು.5 ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು.
ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಕಳ್ಳನ ಪತ್ತೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದರು. ದೈವದ ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ? ಎಂದು ಭಕ್ತರು ದೈವಕ್ಕೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರವಾಗಿ 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಭಕ್ತರಿಗೆ ಅಭಯ ನೀಡಿತ್ತು.
ಕಳ್ಳತನ ಮಾಡಿದ್ದ ಕಳ್ಳನ ಕೃತ್ಯ ಸಿಸಿ ಕ್ಯಾಮರದಲ್ಲಿ ಸರಿಯಾಗಿದ್ದನ್ನ ಬಹುತೇಕ ಭಕ್ತರು ಗಮನಿಸಿದ್ದರು. ಸಿಸಿ ಕ್ಯಾಮೆರಾದಲ್ಲಿ ನೋಡಿದ ಕಳ್ಳನ ಚಹರೆಯನ್ನು ಹೋಲುವ ವ್ಯಕ್ತಿಯೊಬ್ಬ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಿದ್ರೆ ಮಾಡುತ್ತಿರುವುದನ್ನ ಸ್ಥಳೀಯ ಆಟೋ ರಿಕ್ಷಾ ಚಾಲಕರೋರ್ವರು ಜುಲೈ 6 ರಂದು ಗಮನಿಸಿದ್ದಾರೆ. ತಕ್ಷಣ ಸ್ಥಳೀಯ ಪೊಲೀಸರಿಗೆ ಆಟೋ ಚಾಲಕ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಳ್ಳನನ್ನ ಬಂಧಿಸಿದ್ದಾರೆ.
ಬಾಗಲಕೋಟೆ ಮೂಲದ ಮುದುಕಪ್ಪ, ವಿಚಾರಣೆ ಮಾಡಿದಾಗ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ದೇವಸ್ಥಾನಗಳಲ್ಲಿ ಕಳ್ಳತನ ಮಾಡುವ ಚಾಳಿ ಇರುವ ಮುದುಕಪ್ಪ ಚಿಟ್ಪಾಡಿ, ಉದ್ಯಾವರ ಭಾಗದಲ್ಲಿ ಕಳ್ಳತನ ನಡೆಸಿ ಕದ್ದ ಹಣದೊಂದಿಗೆ ಊರಿಗೆ ತೆರಳುವ ಸಿದ್ಧತೆ ಮಾಡಿದ್ದ. ಬಸ್ ಸಿಗದ ಕಾರಣ ಬಸ್ಟ್ಯಾಂಡ್ನಲ್ಲಿ ಮಲಗಿದ್ದ ಮುದುಕಪ್ಪನಿಗೆ ಮುಂಜಾನೆ 8 ಗಂಟೆಯಾದರೂ ಎಚ್ಚರಿಕೆ ಆಗದ ಹಿನ್ನೆಲೆಯಲ್ಲಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ.